
ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಾರ್ನ್ ಮಾಡಿದರೆ ದಂಡ ತೆರಬೇಕಾಗುತ್ತದೆ ಹುಷಾರ್! ಏಕೆಂದರೆ, ಕಬ್ಬನ್ ಪಾರ್ಕ್ ಅನ್ನು ನಿಶ್ಯಬ್ದ ವಲಯ ಎಂದು ಘೋಷಿಸಲಾಗಿದೆ.
ಕಬ್ಬನ್ ಉದ್ಯಾನವನದ ಎಲ್ಲಎಂಟು ಪ್ರವೇಶ ದ್ವಾರಗಳು, ಗ್ರಂಥಾಲಯ ಸೇರಿ ಆಯ್ದ 16 ನಿಗದಿತ ಜಾಗಗಳಲ್ಲಿ’ನಿಶ್ಯಬ್ದ ವಲಯ’ ಎಂದು ಫಲಕಗಳನ್ನು ಹಾಕಲಾಗಿದೆ. ಹೀಗಾಗಿ ಈ ಫಲಕ ಇರುವೆಡೆ ವಾಹನ ಸವಾರರು ಹಾರ್ನ್ ಮಾಡುವಂತಿಲ್ಲ.
ಒಂದೊಮ್ಮೆ ನಿಯಮ ಉಲ್ಲಂಘಿಘಿಸಿದರೆ, ದಂಡ ತೆರಬೇಕಾಗುತ್ತದೆ. ಇಂಥದ್ದೊಂದು ಮಹತ್ವದ ಆದೇಶವನ್ನು ತೋಟಗಾರಿಕೆ ಇಲಾಖೆ ಹೊರಡಿಸಿದೆ.
ಕಬ್ಬನ್ ಪಾರ್ಕ್ನೊಳಗೆ ವಾಹನಗಳ ಹಾರ್ನ್ ಶಬ್ದದಿಂದ ಸಾರ್ವಜನಿಕರು ಹಾಗೂ ಪಕ್ಷಿಗಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿನಗರ ಸಂಚಾರ ಪೊಲೀಸರ ಜತೆ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಕ್ಷಿಗಳಿಗೆ ಭಯ ಹುಟ್ಟಿಸುವ ಹಾರ್ನ್:”ಕಬ್ಬನ್ ಉದ್ಯಾನಕ್ಕೆ ಸಾಕಷ್ಟು ಮಂದಿ ಭೇಟಿ ನೀಡುತ್ತಾರೆ. ಇಂಥವರಿಗೆ ನಿಶ್ಯಬ್ದ ವಾತಾವರಣ ಕಲ್ಪಿಸಬೇಕೆಂಬ ಸಲಹೆ ಕೇಳಿಬಂದಿತ್ತು. ಸಾಕಷ್ಟು ಮಂದಿ ಈ ಬಗ್ಗೆ ದೂರುಗಳನ್ನು ಕೂಡ ಸಲ್ಲಿಸುತ್ತಿದ್ದರು.
ಅಲ್ಲದೆ ಉದ್ಯಾನವು ಬಹು ಹಿಂದಿನಿಂದಲೂ ಹತ್ತಾರು ಬಗೆಯ ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿದೆ. ಕರ್ಕಶ ಹಾರ್ನ್‌ನಿಂದಾಗಿ ಪಕ್ಷಿಗಳು ಭಯದಿಂದ ಹಾರಿ ಹೋಗುತ್ತವೆ.
ಹೀಗಾಗಿ ಉದ್ಯಾನದ ಕೆಲವು ಭಾಗಗಳನ್ನಾದರೂ ನಿಶ್ಯಬ್ದವಾಗಿಡಲು ಪ್ರಯತ್ನಿಸುತ್ತಿದ್ದೇವೆ,”ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ಕಬ್ಬನ್‌ಪಾರ್ಕ್ನ ಉಸ್ತುವಾರಿದಾರರೂ ಆದ ಎಚ್.ಟಿ.ಬಾಲಕೃಷ್ಣ ತಿಳಿಸಿದರು.
ಉದ್ಯಾನದ ಎಲ್ಲಾ ಎಂಟು ಪ್ರವೇಶ ದ್ವಾರಗಳಲ್ಲಿಮತ್ತು ಗ್ರಂಥಾಲಯ ಸೇರಿದಂತೆ ಆಯ್ದ 16 ಸ್ಥಳಗಳಲ್ಲಿ ವಾಹನಗಳು ಶಬ್ದ ಮಾಡುವಂತಿಲ್ಲ. ಈ ಸಂಬಂಧ ಉದ್ಯಾನದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಒಂದು ತಿಂಗಳ ಕಾಲ ಉದ್ಯಾನದಲ್ಲಿಇದರ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ನಿಯಮಗಳನ್ನು ಪಾಲಿಸದ ಸವಾರರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಎಚ್.ಟಿ.ಬಾಲಕೃಷ್ಣ ಹೇಳಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ನಗರದ ಆಯ್ದ 12 ಸ್ಥಳಗಳನ್ನು ನಿಶ್ಯಬ್ದ ವಲಯಗಳೆಂದು ಘೋಷಿಸಿ ಆದೇಶ ಹೊರಡಿಸಿದೆ. ಅದರಂತೆ ಪ್ಯಾಲೇಸ್ ರಸ್ತೆ (ಮಹಾರಾಣಿ ಜಂಕ್ಷನ್‌ನಿಂದ ಸಿಐಡಿ ಜಂಕ್ಷನ್‌ವರೆಗೆ), ಅಂಬೇಡ್ಕರ್ ರಸ್ತೆ (ಕೆ.ಆರ್. ವೃತ್ತದಿಂದ ಅಂಬೇಡ್ಕರ್ ಜಂಕ್ಷನ್‌ವರೆಗೆ), ಮ್ಯೂಸಿಯಂ ರಸ್ತೆ (ಆಶೀರ್ವಾದಂ ಜಂಕ್ಷನ್‌ನಿಂದ ಎಸ್‌ಬಿಐ ಜಂಕ್ಷನ್‌ವರೆಗೆ),
ಸೇಂಟ್ ಮಾರ್ಕ್ಸ್ ರಸ್ತೆ (ಎಸ್‌ಬಿಐ ಜಂಕ್ಷನ್‌ನಿಂದ ಕೋಶಿಸ್ ಹೋಟೆಲ್ ಜಂಕ್ಷನ್‌ವರೆಗೆ ಹಾಗೂ ಬಿಷಪ್ ಕಾಟನ್ ಬಾಲಕಿಯರ ಶಾಲೆಯಿಂದ ಕ್ಯಾಷ್ ಫಾರ್ಮಸಿವರೆಗೆ), ಎಂ.ಎಸ್.ಬಿಲ್ಡಿಂಗ್ ಒಳಭಾಗ (ಎಜಿಎಸ್ ವೃತ್ತದಿಂದ ಡಾ. ಅಂಬೇಡ್ಕರ್ ರಸ್ತೆಯವರೆಗೆ), ಶಾಸಕರ ಭವನ (ವಿಧಾನಸೌಧದಿಂದ ಎಲ್‌ಎಚ್ ಒಳಭಾಗದ ಆವರಣ),
ಹೈಕೋರ್ಟ್ (ಹೈಕೋರ್ಟ್ ಒಳಭಾಗದ ಎಲ್ಲಾರಸ್ತೆಗಳು), ರಾಜಭವನ (ರಾಜಭವನ ಒಳಭಾಗದ ಎಲ್ಲಾರಸ್ತೆಗಳು), ವಿಧಾನಸೌಧ (ವಿಧಾನಸೌಧದ ಒಳಭಾಗದ ಎಲ್ಲಾರಸ್ತೆಗಳು) ಹಾಗೂ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಗಳು (ಕಬ್ಬನ್ ಪಾರ್ಕ್ ಸಂಪೂರ್ಣ).