ಕನ್ನಡ ಭಾಷೆ ಕಡ್ಡಾಯಕ್ಕೆ ಮಂಡನೆಯಾಯ್ತು ಮಸೂದೆ: ತಪ್ಪು ಮಾಡಿದ್ರೆ ಇರಲಿದೆ ದಂಡ- ಇಲ್ಲಿದೆ ಡಿಟೇಲ್ಸ್

ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸುವುದಕ್ಕಾಗಿ ಪ್ರತ್ಯೇಕ ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಇಂದು ಮಂಡಿಸಲಾಯಿತು. ಇದು ಸದ್ಯ ಮಸೂದೆಯಾಗಿದ್ದು, ಉಭಯ ಸದನಗಳಲ್ಲಿ ಒಪ್ಪಿಗೆಯಾದರೆ ನಂತರ ಇದು ಕಾನೂನು ಆಗಿ ಜಾರಿಗೆ ಬರಲಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯಲ್ಲಿರುವ ಮುಖ್ಯಾಂಶಗಳು
– ಉನ್ನತ ತಾಂತ್ರಿಕ/ ವೃತ್ತಿ ಶಿಕ್ಷಣದಲ್ಲಿ, ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಚಯಿಸುವುದು.
– ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ ಉನ್ನತ, ತಾಂತ್ರಿಕ ಮತ್ತು ವೃತ್ತಿ ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವುದು.
– ರಾಜ್ಯ ಸರ್ಕಾರ, ರಾಜ್ಯದಲ್ಲಿನ ಸ್ಥಳೀಯ ಪ್ರಾಧಿಕಾರಗಳು, ಶಾಸನಬದ್ಧ ಮತ್ತು ಶಾಸನೇತರ ಸಂಸ್ಥೆಗಳು ಮತ್ತು ಸಹಕಾರಿ ಸಂಘಗಳು ಹಾಗೂ ಇತರ ಸಂಘಗಳಲ್ಲಿ ಉದ್ಯೋಗವನ್ನು ಪಡೆಯಲು ಕನ್ನಡ ಭಾಷೆಯನ್ನು ಅತ್ಯವಶ್ಯಕ ಭಾಷೆ ಆಗಿರುವುದು.
– ಅಧೀನ ನ್ಯಾಯಾಲಯಗಳಲ್ಲಿ, ನ್ಯಾಯಾಧೀಕರಣಗಳಲ್ಲಿ, ಬ್ಯಾಂಕುಗಳಲ್ಲಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಬಳಸುವುದು.
– ಕನ್ನಡ ಭಾಷೆಯ ವ್ಯಾಪಕ ಬಳಕೆ ಮತ್ತು ಪ್ರಚಾರಕ್ಕಾಗಿ ಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.
– ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಾಂಶ ಅಭಿವೃದ್ಧಿಯಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು.
– ರಾಜ್ಯದಲ್ಲಿ ಅಧಿಸೂಚಿಸಿರುವ ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲ ಕೈಗಾರಿಕೆಗಳು ಸರ್ಕಾರದಿಂದ ತೆರಿಗೆ ರಿಯಾಯತಿ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಕ್ಕನ್ನು ನೀಡುವುದು.
-ಕನ್ನಡ ಭಾಷೆ ಕಾಯ್ದೆ ಅನುಷ್ಠಾನ ಮಾಡದಿದ್ದರೆ ಮೇಲ್ವಿಚಾರಣೆಗೆ ಅಧಿಕಾರ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲು ಅವಕಾಶವಿದೆ: ಅದರ ಅನ್ವಯ ಮೊದಲನೇ ಸಾರಿ ತಪ್ಪು ಮಾಡಿದ್ರೆ 5 ಸಾವಿರ ರೂ, ಎರಡನೇ ಸಾರಿ ತಪ್ಪು ಮಾಡಿದ್ರೆ 10 ಸಾವಿರ ರೂ., ಮೂರನೇ ಸಾರಿ ತಪ್ಪು ಮಾಡಿದ್ರೆ 20 ಸಾವಿರ ರೂ ದಂಡ ವಿಧಿಸಲಾಗುವುದು.