
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಾಸ್ಯ ನಟ ಮನದೀಪ್ ರಾಯ್ (74) ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಇತ್ತೀಚೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದ ಮನದೀಪ್ ರಾಯ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚೇತರಿಕೆ ಬಳಿಕ ಮನೆಗೆ ವಾಪಸ್ ಆಗಿದ್ದ ಅವರು ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.
500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ: 1949ರಲ್ಲಿ ಜನಿಸಿದ ಮನದೀಪ್ ರಾಯ್ ಹಲವು ದಶಕಗಳಿಂದ ಹಾಸ್ಯ ಕಲಾವಿದರಾಗಿ ರಂಜಿಸಿದ್ದಾರೆ. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ಇವರು. ಬೆಳದಿಂಗಳ ಬಾಲೆ, ಆಪ್ತರಕ್ಷಕ, ಪುಷ್ಪಕ ವಿಮಾನ, ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತ ರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಹೊಸ ಕಿರಿಯ ಕಲಾವಿದರೊಂದಿಗೆ ಎಲ್ಲಾ ದಿಗ್ಗಜರ ಜೊತೆಯೂ ನಟಿಸಿರುವ ಹೆಗ್ಗಳಿಕೆ ಇವರದ್ದು.

ರಂಗಭೂಮಿ ಕಲಾವಿದರೂ ಆಗಿದ್ದ ಮನದೀಪ್ ರಾಯ್ ಪೋಷಕ ಪಾತ್ರದಲ್ಲಿ ಖ್ಯಾತಿ ಪಡೆದಿದ್ದರು.