ಕನ್ನಡ ಕಡಗಣನೆ ಡಿಕೆಶಿ ಕಿಡಿ

ಕೇಂದ್ರ ಸರ್ಕಾರದ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್ಎಸ್ಸಿ) ವಿವಿಧ ಹುದ್ದೆಗಳ ಪರೀಕ್ಷೆಯಲ್ಲಿ ಕನ್ನಡವನ್ನು ನಿಕ್ಷಿಸಿರುವುದು ಸರಿಯಲ್ಲ, ಕನ್ನಡ ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮೊಳಗುತ್ತಿದೆ. ಗಾಯನ ಮೊಳಗಿಸುತ್ತಿರುವ ಕೋಟಿ ಕಂಠಗಳು ಈ ಅನ್ಯಾಯದ ವಿರುದ್ಧ ದನಿ ಎತ್ತಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್, ಬಿಎಸ್ಎಫ್, ಸಿಆರ್ಎಫ್, ಐಟಿಬಿಪಿ, ಎಸ್ಎಸ್ಬಿಯ ಕಾನ್ಸ್ಟೇಬಲ್ ಹುದ್ದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸದಿದ್ದರೆ ಕನ್ನಡಿಗರು ಅವಕಾಶ ವಂಚಿತರಾಗುತ್ತಾರೆ. ಹಾಗಾಗಿ ಕನ್ನಡದಲ್ಲಿ ಪರೀಕ್ಷೆ ನಡೆಸಬೇಕು ಎಂದು ಡಿ.ಕೆ ಶಿವಕುಮಾರ್ ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.
ರಾಜ್ಯಸರ್ಕಾರ ಕೂಡಲೇ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು, ಇಲ್ಲವಾದಲ್ಲಿ ಕನ್ನಡಿಗರ ಪರವಾಗಿ ಹೋರಾಟದ ಹಾದಿ ಹಿಡಿಯಬೇಕಾದಿತು. ಇದು ಕನ್ನಡಿಗನ ಎಚ್ಚರಿಕೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹೆಚ್ಡಿಕೆ ಅಸಮಾಧಾನಕಾನ್ಸ್ಟೇಬಲ್ ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ನಡೆಸದಿರುವ ಎಸ್ಎಸ್ಸಿ ತೀರ್ಮಾನಕ್ಕೆ ಅಸಮಾಧಾನ ಹೊರಹಾಕಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದಿ-ಇಂಗ್ಲಿಷ್ನಲ್ಲಿ ಮಾತ್ರ ಬರೆಯುವ ಅವಕಾಶ ನೀಡಿದರೆ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವ ಅಭ್ಯರ್ಥಿಗಳು ಏನು ಮಾಡಬೇಕು? ಹಿಂದಿಗೆ ಬೆಣ್ಣೆ, ಕನ್ನಡಕ್ಕೆ ಸುಣ್ಣ ಇದೆಂಥ ನ್ಯಾಯ ಎಂದು ಟ್ವಿಟರ್ನಲ್ಲಿ ಕಿಡಿಕಾರಿದ್ದಾರೆ.
ಕೋಟಿ ಕಂಠ ಗಾಯನ ಎಂದರೆ ಕೋಟಿಗೂ ಹೆಚ್ಚು ಕನ್ನಡ ಕಂಠಗಳಿಗೆ ಜೀವ ತುಂಬುವುದು, ಅನ್ನದ ದಾರಿ ತೋರಿಸುವುದು, ಬದುಕಿನ ಖಾತರಿ ಕೊಡುವುದು, ಕೇವಲ ನಾಲಿಗೆ ಮೇಲೆ ಕನ್ನಡ ಎಂದು ಹೇಳಿ, ಮನದಾಳದಲ್ಲಿ ಅದೇ ಕನ್ನಡದ ಮೇಲೆ ವಿಷ ಕಕ್ಕುವುದಲ್ಲ, ರಾಜ್ಯ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಏನು ಹೇಳುತ್ತದೆ.
ಕೋಟಿ ಕಂಠ ಗಾಯನ ಎನ್ನುತ್ತಲೇ ಕನ್ನಡಿಗರ ಹಕ್ಕುಗಳಿಗೆ ಮರಣ ಶಾಸನ ಬರೆಯುವುದಾ? ಕನ್ನಡಿಗರಿಗೆ ಬೇಕಿದೆ ಉತ್ತರ ಎಂದು ಅವರು ಟ್ವೀಟ್ ಮಾಡಿದ್ದಾರೆ.