ಬೆಂಗಳೂರುಸಿನಿಮಾ

ಕನ್ನಡದ ಪ್ರತಿಭಾವಂತ ನಟ ಉದಯ್ ಹುತ್ತಿನಗದ್ದೆ ನಿಧನ

ಬೆಂಗಳೂರು : ಕನ್ನಡ ಚಿತ್ರಗಳಲ್ಲೂ ಗಾನಸುಧೆ ಹರಿಸಿದ್ದ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ನಿಧನ ಚಿತ್ರರಂಗದವರಿಗೆ ದಿಗ್ಭ್ರಮೆ ಮೂಡಿಸಿದೆ. ಈ ನೋವು ಮಾಸುವ ಮುನ್ನವೇ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಒಂದ್ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿನುಗಿದ್ದ ಪ್ರತಿಭಾವಂತ ನಟ ಉದಯ್ ಹುತ್ತಿನಗದ್ದೆ ವಿಧಿವಶರಾಗಿದ್ದಾರೆ.
ನಟ ಉದಯ್ ಹುತ್ತಿನಗದ್ದೆ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರದ ತಮ್ಮ ಸ್ವಗೃಹದಲ್ಲಿ ನಟ ಉದಯ್ ಹುತ್ತಿನಗದ್ದೆ ಕೊನೆಯುಸಿರೆಳೆದಿದ್ದಾರೆ.

ಆರಂಭ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ
ಡಾ.ರಾಜ್‌ಕುಮಾರ್ ಅವರು ಅಭಿನಯಿಸಿದ್ದ ‘ದೇವತಾ ಮನುಷ್ಯ’ ಚಿತ್ರದಲ್ಲಿ ಸುಧಾರಾಣಿ ಅವರ ಜೋಡಿಯಾಗಿ ಉದಯ್ ಹುತ್ತಿನಗದ್ದೆ ನಟಿಸಿದ್ದರು. ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಉದಯ್ ಹುತ್ತಿನಗದ್ದೆ ಪಾತ್ರವಾಗಿದ್ದರು.
ಅಸಲಿಗೆ, 1987 ರಲ್ಲಿ ತೆರೆಕಂಡಿದ್ದ ತಮ್ಮ ನಿರ್ಮಾಣದ ‘ಆರಂಭ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಉದಯ್ ಹುತ್ತಿನಗದ್ದೆ ಕಾಲಿಟ್ಟರು. ‘ಅಗ್ನಿಪರ್ವ’, ‘ಶುಭ ಮಿಲನ’ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.

ಉದಯ್ ಹುತ್ತಿನಗದ್ದೆ ನಟಿಸಿದ ಸಿನಿಮಾಗಳು
1989 ರಲ್ಲಿ ರಿಲೀಸ್ ಆಗಿದ್ದ ‘ಜಯಭೇರಿ’, 1990 ರಲ್ಲಿ ಬಿಡುಗಡೆ ಆಗಿದ್ದ ‘ಉದ್ಭವ’, 1990 ರಲ್ಲಿ ತೆರೆಗೆ ಬಂದಿದ್ದ ‘ಅಮೃತ ಬಿಂದು’, 1991 ರಲ್ಲಿ ಪ್ರೇಕ್ಷಕರೆದುರಿಗೆ ಬಂದಿದ್ದ ‘ಶಿವಯೋಗಿ ಅಕ್ಕಮಹಾದೇವಿ’, 1991 ರಲ್ಲಿ ರಿಲೀಸ್ ಆಗಿದ್ದ ‘ಉಂಡು ಹೋದ ಕೊಂಡು ಹೋದ’, 1991 ರಲ್ಲಿ ಬಿಡುಗಡೆಯಾಗಿದ್ದ ‘ಕ್ರಮ’ ಚಿತ್ರಗಳಲ್ಲಿ ಉದಯ್ ಹುತ್ತಿನಗದ್ದೆ ಮಿಂಚಿದ್ದರು.

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟ ಉದಯ್ ಹುತ್ತಿನಗದ್ದೆ
ರೆಬೆಲ್ ಸ್ಟಾರ್ ಅಂಬರೀಷ್, ಕರಾಟೆ ಕಿಂಗ್ ಶಂಕರ್ ನಾಗ್, ಅನಂತ್ ನಾಗ್, ಡಾ.ವಿಷ್ಣುವರ್ಧನ್, ಟೈಗರ್ ಪ್ರಭಾಕರ್ ಮುಂತಾದ ನಟರೊಂದಿಗೆ ಉದಯ್ ಹುತ್ತಿನಗದ್ದೆ ತೆರೆಹಂಚಿಕೊಂಡಿದ್ದರು. ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ಬಳಿಕ ಚಿತ್ರರಂಗದತ್ತ ಉದಯ್ ಹುತ್ತಿನಗದ್ದೆ ಸುಳಿಯಲಿಲ್ಲ. ನಟನೆಯಿಂದ ದೂರ ಉಳಿದಿದ್ದ ಉದಯ್ ಹುತ್ತಿನಗದ್ದೆ ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಉದಯ್ ಹುತ್ತಿನಗದ್ದೆ

ನಟ ಉದಯ್ ಹುತ್ತಿನಗದ್ದೆ ಮೂಲತಃ ಚಿಕ್ಕಮಗಳೂರಿನವರು. ಬಸರಿಕಟ್ಟೆ ಎಂಬ ಊರಿನಲ್ಲಿ ಜನಿಸಿದವರು ಉದಯ್ ಹುತ್ತಿನಗದ್ದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ಉದಯ್ ಹುತ್ತಿನಗದ್ದೆ ‘ಅಭಿನಯ ತರಂಗ’ದಲ್ಲಿ ನಟನೆ ತರಬೇತಿ ಪಡೆದರು. ಬಳಿಕ ಚಿತ್ರರಂಗಕ್ಕೆ ನಟ ಉದಯ್ ಹುತ್ತಿನಗದ್ದೆ ಪದಾರ್ಪಣೆ ಮಾಡಿದರು. ಕೆಲ ವರ್ಷಗಳ ಬಳಿಕ ಅಭಿನಯಕ್ಕೆ ನಟ ಉದಯ್ ಹುತ್ತಿನಗದ್ದೆ ಗುಡ್ ಬೈ ಹೇಳಿದರು. ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿಯಲ್ಲಿ ಉದಯ್ ಹುತ್ತಿನಗದ್ದೆ ಪರಿಣಿತಿ ಪಡೆದಿದ್ದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿರುವ ಉದಯ್ ಹುತ್ತಿನಗದ್ದೆ ಅದೇ ಉದ್ಯಮದಲ್ಲಿ ಹಾಗೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button