
ಕಣ್ಣಿನ ಸರ್ಜರಿ ಹಾಗೂ ಇತರ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ನೆರವು ನೀಡಲು ಅನುಕೂಲವಾಗುವಂತೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ಮಹಾಸಂಸ್ಥೆಯ (ಎಐಐಎಂಎಸ್) ಕಣ್ಣಿನ ವಿಭಾಗ ಆಪ್ನ್ನು ಅಭಿವೃದ್ಧಿ ಪಡಿಸುತ್ತಿದೆ.
ಆಧುನಿಕ ತಂತ್ರಜ್ಞಾನದ ನೆರವಿನಲ್ಲಿ ದೇಶದ ಯಾವುದೇ ಮೂಲೆಯಲ್ಲಿದ್ದರೂ ರೋಗಿಗಳು ಏಮ್ಸ್ ತಜ್ಞ ವೈದ್ಯರ ಸಲಹೆ ಮತ್ತು ನೆರವು ಪಡೆಯಲು ಈ ಆಪ್ ಸಹಾಯಕವಾಗಲಿದೆ.
ಏಮ್ಸ್ನ ನೇತ್ರ ಚಿಕಿತ್ಸಾ ವಿಭಾಗ ಈ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ ಎಂದು ಮುಖ್ಯಸ್ಥ ಡಾ.ಜೆ.ಎಸ್.ಟಿಟಿಯಾಲ್ ತಿಳಿಸಿದ್ದಾರೆ.
ಕೋವಿಡ್ ನಮಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಕೆಲವು ಸಂದರ್ಭಗಳಲ್ಲಿ ಚಿಕಿತ್ಸೆ ಅಗತ್ಯ ಇರುವವರು ಖುದ್ದಾಗಿ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ.
ಕೆಲವರು ದೂರದ ಊರಿನಲ್ಲಿ ನೆಲೆಸಿದ್ದು ಅವರಿಗೆ ಕಾಲಾನುಕ್ರಮದಂತೆ ಆಸ್ಪತ್ರೆಗೆ ಭೇಟಿ ನೀಡಲು ಕಷ್ಟವಾಗಬಹುದು. ಅಂತಹವರಿಗಾಗಿ ಈ ಆಪ್ ಹೆಚ್ಚು ಅನುಕೂಲವಾಗಲಿದೆ ಎಂದರು.
ಈ ಆಪ್ ಮೂಲಕ ರೋಗಿಗಳಿಗೆ ನೇರವಾಗಿ ನಿರ್ದೇಶನಗಳನ್ನು ನೀಡಬಹುದು, ಆಪ್ನಲ್ಲಿ ಕ್ಯಾಮರಾ ಬಳಕೆ ಮಾಡುವ ಅವಕಾಶವೂ ಇದೆ. ಫೋಟೋ ತೆಗೆದು ವೈದ್ಯರಿಗೆ ಕಳುಹಿಸಿ, ನೇರ ಸಮಾಲೋಚನೆ ನಡೆಸಬಹುದಾಗಿದೆ.
ತಮ್ಮ ಸಮಸ್ಯೆಗಳನ್ನು ರೋಗಿಗಳು ಹೇಳಿಕೊಳ್ಳಬಹುದು. ಶಸ್ತ್ರ ಚಿಕಿತ್ಸೆಗೆ ಒಳಗಾದವರ ಮೇಲೆ ನಿಗಾ ವಹಿಸಲು ಈ ಆಪ್ ನೆರವಾಗಲಿದೆ ಎಂದರು.
ಸರ್ಜರಿಗೆ ಒಳಗಾದವರಿಗೆ ತಿರಸ್ಕಾರ ಪರಿಸ್ಥಿತಿ ಕಂಡು ಬಂದರೆ ಒಂದೆರಡು ವಾರಗಳಲ್ಲಿ ಅವರು ಮತ್ತೆ ಸರ್ಜರಿಗೆ ಒಳಗಾಗಬೇಕು.
ಆದರೆ ಆಸ್ಪತ್ರೆಗೆ ತಲುಪಲು ಕಷ್ಟವಾಗುತ್ತಿದೆ. ಅಂತಹವರನ್ನು ಆಪ್ ಮೂಲಕವೇ ನಿಗಾವಹಿಸಿ, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಲಹೆ ನೀಡಲಾಗುವುದು ಎಂದು ಹೇಳಿದರು.
ಇತರ ಆಸ್ಪತ್ರೆಗಳಿಗೆ ತಜ್ಞರಿಂದ ತರಬೇತಿ ಕೊಡುವ, ಕ್ಲಿಷ್ಟ ಸರ್ಜರಿಗಳನ್ನು ನಿಭಾಯಿಸುವ ಸಲುವಾಗಿಯೂ ಆಪ್ ಬಳಕೆ ಮಾಡಲಾಗುವುದು ಎಂದರು.