ಕಡಲೆಕಾಯಿ ಪರಿಷೆಗೆ ತೆಪ್ಪೋತ್ಸವದ ಮೆರುಗು: ಕಡೇ ಕಾರ್ತಿಕ ಸೋಮವಾರಕ್ಕೂ ಮುನ್ನ ಪರಿಷೆಗೆ ಚಾಲನೆ

ಬೆಂಗಳೂರು: ನಗರದ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಈ ಬಾರಿ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ನಿರ್ಧರಿಸಲಾಗಿದ್ದು, ಹಲವು ವಿಶೇಷತೆಗಳೊಂದಿಗೆ ಅತ್ಯಂತ ವೈಭವದಿಂದ ನಡೆಯಲಿದೆ.
ದಶಕದ ಹಿಂದೆ ಕೆಂಪಾಂಬುಧಿ ಕೆರೆಯಲ್ಲಿ ನಂದಿ ತೆಪ್ಪೋತ್ಸವ ನಡೆಸಲಾಗಿತ್ತು. ನಾನಾ ಕಾರಣಗಳಿಂದ ನಂತರ ಅದು ಸ್ಥಗಿತಗೊಂಡಿತ್ತು. ಈ ವರ್ಷ ಮತ್ತೆ ಅದನ್ನು ಆರಂಭಿಸಲಾಗುತ್ತಿದೆ. ಹೀಗಾಗಿ, ಕಡಲೆಕಾಯಿ ಪರಿಷೆಗೆ ವಿಶೇಷ ಮೆರುಗು ಸಿಗಲಿದೆ.
ಬ್ಯೂಗಲ್ ರಾಕ್ ಮತ್ತು ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ.ಕಡೇ ಕಾರ್ತೀಕ ಸೋಮವಾರವಾದ ನ.21ರಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯನ್ನು ಪರಿಚಯಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳೂ ಸೇರಿದಂತೆ ಹತ್ತು ಹಲವು ವಿನೂತನ ಕಾರ್ಯಕ್ರಮಗಳನ್ನೂ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಬಾರಿ ಸೋಮವಾರದ ಬದಲಿಗೆ ಭಾನುವಾರ ಸಂಜೆಯೇ ಕಡಲೆಕಾಯಿ ಪರಿಷೆ ಉದ್ಘಾಟಿಸಲಾಗುವುದು. ಏಕೆಂದರೆ ಸೋಮವಾರ ದೇವಾಲಯಕ್ಕೆ ಸಾಕಷ್ಟು ಮಂದಿ ಬರುವುದರಿಂದ ನೋಡುಗರಿಗೆ ಯಾವುದೇ ರೀತಿ ಅಡ್ಡಿಯಾಗದಿರಲಿ ಎಂಬ ಉದ್ದೇಶದಿಂದ ಒಂದು ದಿನ ಮುಂಚಿತವಾಗಿ ನಡೆಸಲಾಗುವುದು.
ಸೋಮವಾರ ಎಂದಿನಂತೆ ಸಾಂಪ್ರದಾಯಿಕವಾಗಿ ಸರಳವಾಗಿ ಪೂಜೆ ನಡೆಸಿ, ದೇವಸ್ಥಾನದಲ್ಲಿ ಜನಸಂದಣಿಯಾಗದಂತೆ ಸಾರ್ವಜನಿಕರಿಗೆ ದೇವರ ದರ್ಶನ ಮತ್ತು ಪರಿಷೆ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು,” ಎಂದು ಬಸವನಗುಡಿ ಕ್ಷೇತ್ರದ ಶಾಸಕ ಎಲ್.ಎ. ರವಿಸುಬ್ರಹ್ಮಣ್ಯ ತಿಳಿಸಿದರು.
ಪರಿಷೆ ಎಂದರೆ ಕೇವಲ ಕಡ್ಲೆಕಾಯಿ ಮಾರಾಟವಷ್ಟೇ ಅಲ್ಲ, ಒಂದು ಹಳ್ಳಿಯ ಚಿತ್ರಣವೇ ತೆರೆದುಕೊಳ್ಳಲಿದೆ. ನ.19ರಿಂದಲೇ (ಶನಿವಾರ) ಜನ ಪರಿಷೆಗೆ ತಂಡೋಪತಂಡವಾಗಿ ಬರಲಿದ್ದಾರೆ. ಭಾನುವಾರ ಮತ್ತು ಸೋಮವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವರು.
ಆದರೆ, ಪರಿಷೆ ಆರಂಭಕ್ಕೂ ನಾಲ್ಕು ದಿನ ಮೊದಲು ಮತ್ತು ನಂತರ ನಾಲ್ಕು ದಿನಗಳ ಕಾಲವೂ ಮಳಿಗೆಗಳು ತೆರೆದಿರುವುದಲ್ಲದೆ ಖರೀದಿಯೂ ನಡೆಯುತ್ತದೆ. ಹೀಗಾಗಿ, ಒಟ್ಟಾರೆ ಕಡಲೆಕಾಯಿ ಪರಿಷೆಯಲ್ಲಿ ಸುಮಾರು 6 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ,” ಎಂದರು.ಈ ವರ್ಷ ರಾಮನಗರ, ಮಾಗಡಿ, ಕನಕಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಕಡ್ಲೆಕಾಯಿ ಬೆಳೆಯುವ ಪ್ರದೇಶಗಳಲ್ಲಿ ಒಳ್ಳೆಯ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿ ಬಂದಿದೆ. ಹೀಗಾಗಿ, ಪರಿಷೆಗೆ ಭರಪೂರ ಕಡ್ಲೆಕಾಯಿಗಳು ಬರುವ ಸಾಧ್ಯತೆಯಿದೆ.
‘ಸಾಮ್ರಾಟ್, ಗಡಂಗ್, ಬಾದಾಮಿ…’ ಇಂತಹ ಹತ್ತಾರು ಜಾತಿಯ ಕಡಲೆಕಾಯಿಗಳು ಬಸವನಗುಡಿಯ ಬುಲ್‌ಟೆಂಪಲ್ ರೋಡ್‌ಗೆ ಆಗಮಿಸಲಿವೆ. ರುಚಿ ಮತ್ತು ಗಾತ್ರದಲ್ಲಿ ಒಂದಕ್ಕಿಂತ ಒಂದು ಭಿನ್ನವಾಗಿರಲಿದ್ದು, ಕೆಲವು ಮೂರು ಬೀಜದ ಕಾಯಿಗಳಾದರೆ, ಮತ್ತೆ ಕೆಲವು ಎರಡು, ಮತ್ತೆ ಕೆಲವು ಕಾಯಿಗಳು ಒಂದು ಬೀಜದೊಂದಿಗೆ ಕಡ್ಲೆಕಾಯಿ ಪ್ರಿಯರನ್ನು ಸೆಳೆಯಲಿವೆ.
ಅಷ್ಟೇ ಅಲ್ಲ, ಕೆಂಪು ಮಣ್ಣು, ಕಪ್ಪು ಮಣ್ಣಿನಲ್ಲಿ ಬೆಳೆದ ಒಂದೊಂದು ಬಗೆಯ ಕಡ್ಲೆಕಾಯಿಗಳ ರಾಶಿಯೂ ಸೆಳೆಯಲಿದೆ. ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳೂ ಸೇರಿದಂತೆ ನಗರದ ನಾನಾ ಭಾಗಗಳ ಸ್ವಯಂ ಸೇವಕರು ಪರಿಷೆಗಾಗಿ ಕೈ ಜೋಡಿಸಲಿದ್ದಾರೆ.
ಈ ಬಾರಿಯ ಪರಿಷೆಯಲ್ಲಿ ಕಡ್ಲೆಕಾಯಿ, ಕಡ್ಲೆಪುರಿ, ಬತ್ತಾಸು, ಸೇರಿದಂತೆ ಅಧಿಕೃತವಾಗಿ ಕನಿಷ್ಠ ಎರಡು ಸಾವಿರ ಮಳಿಗೆಗಳು ತೆರೆಯಲಿವೆ. ಇದಲ್ಲದೆ, ಪೀಪಿ ಮತ್ತಿತರ ಸಾಮಗ್ರಿಗಳನ್ನು ಮಾರುವ ಸಂಚಾರಿ ಮಾರಾಟಗಾರರೂ ಇರುತ್ತಾರೆ.ಮುಜರಾಯಿ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ತಮ್ಮ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಿವೆ.
ಹಳ್ಳಿಯ ವಾತಾವರಣ ಮೂಡಿಸಲು ತೆಪ್ಪೋತ್ಸವ“ಸುಮಾರು 10 ವರ್ಷಗಳ ಹಿಂದೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು. ನಂತರ ಅದು ನಿಂತಿತ್ತು. ಇದೀಗ ಕೆರೆಯಲ್ಲಿದ್ದ ಪಾಚಿ ಮತ್ತಿತರ ಕಸ ಸ್ವಚ್ಛಗೊಳಿಸಲಾಗಿದ್ದು, ಕೆರೆಯನ್ನು ಪುನಃಶ್ಚೇತನಗೊಳಿಸಲಾಗಿದೆ.
ಹೀಗಾಗಿ ಕಡಲೆಕಾಯಿ ಪರಿಷೆಯಲ್ಲಿ ತೆಪ್ಪೋತ್ಸವವನ್ನು ಮತ್ತೆ ನಡೆಸಲು ಮುಂದಾಗಿದ್ದೇವೆ. ಇದೊಂದು ಧಾರ್ಮಿಕ ಆಚರಣೆಯಾದರೂ, ಈ ಮೂಲಕ ಹಳ್ಳಿಯ ವಾತಾವರಣ ಮೂಡಿಸಲಾಗುವುದು.
ಇದು ಮುಂದಿನ ಪೀಳಿಗೆಗೆ ಒಂದು ಒಳ್ಳೆಯ ಸಂದೇಶವನ್ನೂ ನೀಡಲಿದೆ,” ಎಂದು ಎಲ್.ಎ. ರವಿಸುಬ್ರಹ್ಮಣ್ಯ ತಿಳಿಸಿದರು.