Travelಬೆಂಗಳೂರುರಾಜ್ಯ

ಓಲಾ, ಉಬರ್‌ ಆಟೋ ಸೇವೆ ವಿವಾದ, ಜನರಿಗೆ ತೊಂದರೆಯಾಗುವ ತೀರ್ಮಾನ ಬೇಡ ಎಂದ ಹೈಕೋರ್ಟ್‌

ಬೆಂಗಳೂರು: ಆ್ಯಪ್‌ ಆಧಾರಿತ ಆಟೋ ಸೇವೆಗೆ ನ್ಯಾಯಯುತ ದರ ವಿಧಿಸುವ ಸಂಬಂಧ ಓಲಾ ಮತ್ತು ಉಬರ್‌ ಕಂಪನಿಗಳೊಂದಿಗೆ ಸಭೆ ನಡೆಸಿ ಮಾತುಕತೆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಹಮತದ ತೀರ್ಮಾನ ಕೈಗೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆ್ಯಪ್‌ ಆಧಾರಿತ ಓಲಾ ಮತ್ತು ಉಬರ್‌ ಆಟೋ ಸೇವೆ ಸ್ಥಗಿತಕ್ಕೆ ರಾಜ್ಯ ಸರಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದು ಕೋರಿ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಉಬರ್‌ ಇಂಡಿಯಾ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಅರ್ಜಿದಾರರ ಕಂಪನಿಗಳು ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸುತ್ತಿವೆ. ಆದರೆ, ಪರವಾನಗಿ ಪಡೆಯದೆ ಸೇವೆ ಒದಗಿಸುವುದಕ್ಕೆ ಅವಕಾಶ ಇಲ್ಲ.

ಹೆಚ್ಚಿನ ಪ್ರಯಾಣ ದರ ಪಡೆಯಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ದರ ನಿಗದಿ ಸಂಬಂಧ ಸರಕಾರ ನಿಯಮ ರೂಪಿಸಿಲ್ಲ ಎಂದು ಅರ್ಜಿದಾರ ಕಂಪೆನಿಗಳು ಹೇಳುತ್ತಿವೆ.

ಸೇವೆ ಸ್ಥಗಿತ ಮಾಡುವುದರಿಂದ ಅಂತಿಮವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ,” ಹೈಕೋರ್ಟ್‌ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

“ಪ್ರಕರಣ ಸಂಬಂಧ ಅರ್ಜಿದಾರ ಕಂಪೆನಿಗಳೊಂದಿಗೆ ಮತ್ತೊಮ್ಮೆ ಗುರುವಾರ ಮಧ್ಯಾಹ್ನ ಸಭೆ ನಡೆಸಿ ಚರ್ಚಿಸಿದ ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು ಎಂದು ಸರಕಾರ ಹೇಳುತ್ತಿದೆ.

ಆದ್ದರಿಂದ ಪ್ರಕರಣದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ತಾತ್ಕಾಲಿಕ ಪರಿಹಾರ ಕ್ರಮ ಕಂಡುಕೊಳ್ಳುವುದು ಅನಿವಾರ್ಯ,” ಎಂದು ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಬೆಳಗ್ಗೆ 10.30ಕ್ಕೆ ಮುಂದೂಡಿತು.

“ಆಟೋ ಸೇವೆ ಬೆರಳು ತುದಿಯಲ್ಲಿ ಲಭ್ಯವಾಗುತ್ತಿದೆ. ಆದರೆ, ಒಮ್ಮೆ ಬುಕ್‌ ಮಾಡಿ ನಂತರ ರದ್ದುಪಡಿಸಿದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ.

ನ್ಯಾಯಾಲಯವು ಸಾರ್ವಜನಿಕರಿಂದ ಹೆಚ್ಚಿನ ದರ ಸಂಗ್ರಹಿಸುತ್ತಿರುವ ಅಂಶವನ್ನು ಪರಿಗಣಿಸಲಿದೆ. ಆದ್ದರಿಂದ ದರ ವಿಧಿಸುವ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು,” ಎಂದು ಮೌಖಿಕವಾಗಿ ನ್ಯಾಯಪೀಠ ಸಲಹೆ ನೀಡಿತು.

ಅರ್ಜಿದಾರರ ಸಂಸ್ಥೆಗಳ ಪರ ವಕೀಲರು, “ಆ್ಯಪ್‌ ಆಧಾರಿತ ಆಟೋ ಸೇವೆ ನೀಡುವುದಕ್ಕೆ ಪರವಾನಗಿ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಪ್ರಕರಣವು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ.

ಇನ್ನು, ಓಲಾ ಮತ್ತು ಉಬರ್‌ ಆ್ಯಪ್‌ ಮೂಲಕ ಆಟೋ ಸೇವೆ ಸ್ಥಗಿತಗೊಳಿಸಿರುವುದಕ್ಕೆ ಸರಕಾರ ಸಮಂಜಸ ಕಾರಣ ನೀಡಿಲ್ಲ.

ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳು-2016’ರ ನಿಯಮ 2(7) ಅಡಿಯಲ್ಲಿ ಮೋಟಾರು ಕ್ಯಾಬ್‌ (ಟ್ಯಾಕ್ಸಿ) ವ್ಯಾಖ್ಯಾನದಡಿಗೆ ಆಟೋ ಸಹ ಬರುತ್ತದೆ.

ಹಾಗಾಗಿ, ಸೇವೆ ಸ್ಥಗಿತಗೊಳಿಸುವ ಬಗ್ಗೆ ವಿವರಣೆ ಕೇಳಿ ಅ. 6ರಂದು ನೀಡಿರುವ ನೋಟಿಸ್‌ ಮತ್ತು ಸೇವೆ ಸ್ಥಗಿತಗೊಳಿಸಲು ಅ. 11ರಂದು ಹೊರಡಿಸಿರುವ ಆದೇಶಕ್ಕೆ ಮಾನ್ಯತೆ ಇಲ್ಲ,” ಎಂದು ವಿವರಿಸಿದರು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, “ಆಟೋ ಸೇವೆಯು ಟ್ಯಾಕ್ಸಿ ಸೇವೆಯಡಿ ಬರುವುದಿಲ್ಲ. ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳು-2016ರ ನಿಯಮ 4ರಡಿ ಉಬರ್‌ ಮತ್ತು ಓಲಾ ಪರವಾನಗಿ ಪಡೆದಿಲ್ಲ.

ಉಳಿದ ಆಟೋ ಸೇವೆಗೆ ರಾಜ್ಯ ಸರಕಾರ ನಿರ್ದಿಷ್ಟ ದರ ನಿಗದಿಪಡಿಸಿದೆ. ಆದರೆ, ಅದನ್ನು ಅರ್ಜಿದಾರ ಕಂಪೆನಿಗಳು ಪಾಲಿಸುತ್ತಿಲ್ಲ,” ಎಂದು ವಾದಿಸಿದರು.

ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳಡಿ ಟ್ಯಾಕ್ಸಿ ಸೇವೆ ಒದಗಿಸಲು ಓಲಾ ಮತ್ತು ಉಬರ್‌ ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ.

ಆದರೆ, ಪರವಾನಗಿ ಪಡೆಯದೆ ಆಟೋ ಸೇವೆ ಒದಗಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದ ಸಾರಿಗೆ ಇಲಾಖೆ, ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವ ವಿಚಾರವಾಗಿ ವಿವರಣೆ ಕೇಳಿ ಅ. 6ರಂದು ನೋಟಿಸ್‌ ನೀಡಿತ್ತು.

ಸೇವೆ ಸ್ಥಗಿತಗೊಳಿಸಲು ಅ. 11ರಂದು ಆದೇಶ ಮಾಡಿದೆ. ಅದನ್ನು ಪ್ರಶ್ನಿಸಿ ಅರ್ಜಿದಾರ ಕಂಪೆನಿಗಳು ಹೈಕೋರ್ಟ್‌ ಮೊರೆ ಹೋಗಿವೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button