ರಾಜ್ಯ

ಓಲಾ-ಉಬರ್‌ಗೆ ಸೆಡ್ಡು ಹೊಡೆಯಲು ಆಟೋ ಚಾಲಕರು ಸಜ್ಜು, ನ.1ರಂದು ‘ನಮ್ಮ ಯಾತ್ರಿ’ ಆ್ಯಪ್‌ಗೆ ಚಾಲನೆ

ಬೆಂಗಳೂರು: ಮೊಬೈಲ್‌ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ಒದಗಿಸುವ ಓಲಾ ಮತ್ತು ಉಬರ್‌ ಸಂಸ್ಥೆಗಳ ತೀವ್ರ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬೆಂಗಳೂರು ಆಟೋ ಚಾಲಕರ ಒಕ್ಕೂಟವು (ಎಆರ್‌ಡಿಯು) ತನ್ನದೇ ಆ್ಯಪ್‌ ಸೇವೆ ಆರಂಭಿಸಲು ಮುಂದಾಗಿದೆ.

ಒಕ್ಕೂಟವು ನಂದನ್‌ ನೀಲೆಕಣಿ ಬೆಂಬಲಿತ ಬೆಕ್ನ್‌ ಪ್ರತಿಷ್ಠಾನದ ತಾಂತ್ರಿಕ ನೆರವಿನೊಂದಿಗೆ ರೂಪಿಸಿರುವ ‘ನಮ್ಮ ಯಾತ್ರಿ’ ಆ್ಯಪ್‌ ಅನ್ನು ನ.1ರ ಕರ್ನಾಟಕ ರಾಜ್ಯೋತ್ಸವದ ದಿನ ರಾಜಧಾನಿಯಲ್ಲಿ ಸೇವೆಗೆ ಮುಕ್ತಗೊಳಿಸಲು ನಿರ್ಧರಿಸಿದೆ.”ಒಕ್ಕೂಟವು ಸಾರಿಗೆ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದರೂ ಕ್ಯಾಬ್‌ ಸೇವೆಯ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ.

ಹೀಗಾಗಿ ಒಕ್ಕೂಟವು ನ. 1ರಂದು ನಮ್ಮ ಯಾತ್ರಿ ಆ್ಯಪ್‌ ಸೇವೆ ಆರಂಭಿಸಲು ಯೋಜನೆ ಹಾಕಿಕೊಂಡಿದೆ” ಎಂದು ಎಆರ್‌ಡಿಯು ಅಧ್ಯಕ್ಷ ಡಿ. ರುದ್ರಮೂರ್ತಿ ತಿಳಿಸಿದ್ದಾರೆ.ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆಗಳು ಗ್ರಾಹಕರಿಂದ 100 ರೂ.

ಕನಿಷ್ಠ ದರ ಪಡೆದು ಅದರಲ್ಲಿ60 ರೂ.ಗಳನ್ನು ಆಟೋ ಚಾಲಕರಿಗೆ ನೀಡುತ್ತವೆ ಮತ್ತು ಉಳಿದ 40 ರೂ.ಗಳನ್ನು ಕಮಿಷನ್‌ ರೂಪದಲ್ಲಿ ಪಡೆಯುತ್ತವೆ. ಕ್ಯಾಬ್‌ ಸಂಸ್ಥೆಗಳು ಪ್ರಯಾಣ ದರ ಹೆಚ್ಚಿಸಿದ ಬಳಿಕ ಗ್ರಾಹಕರ ಸಂಖ್ಯೆ ಶೇ 50ರಿಂದ 60ರಷ್ಟು ಕುಸಿದಿದೆ. ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ.

ತುರ್ತು ಸ್ಥಿತಿಯಲ್ಲಿ ಪ್ರಯಾಣಿಸಬೇಕಾದವರು ಮತ್ತು ಸ್ವಂತ ವಾಹನ ಇಲ್ಲದವರು ಮಾತ್ರ ಅನಿವಾರ್ಯವಾಗಿ ಕ್ಯಾಬ್‌ ಸಂಸ್ಥೆಗಳು ನಿಗದಿಪಡಿಸಿದಷ್ಟು ದರ ಪಾವತಿಸಿ ಪ್ರಯಾಣಿಸುತ್ತಾರೆ,” ಎಂದು ಹೇಳಿದ್ದಾರೆ.ನಾವು ಗ್ರಾಹಕರಿಂದ ಸರಕಾರ ನಿಗದಿಪಡಿಸಿದ ಪ್ರಯಾಣ ದರವನ್ನೇ ಪಡೆಯುತ್ತೇವೆ. ಅದರ ಜತೆಗೆ ಪಿಕ್‌-ಅಪ್‌ ಶುಲ್ಕದ ರೂಪದಲ್ಲಿ ಹೆಚ್ಚುವರಿಯಾಗಿ 10 ರೂ. ಪಡೆಯುತ್ತೇವೆ.

ಕಚೇರಿ, ಮನೆ ಮತ್ತು ಮೆಟ್ರೊ ರೈಲು ನಿಲ್ದಾಣದ ಅಂತರ 2 ಕಿ.ಮೀ ಮಿತಿಯೊಳಗಿದ್ದರೆ 40 ರೂ. ಸ್ಥಿರ ಚಾರ್ಚ್‌ ಪಡೆಯುವ ಯೋಜನೆ ಬಗ್ಗೆಯೂ ಪರಾಮರ್ಶೆ ನಡೆಸುತ್ತಿದ್ದೇವೆ,” ಎಂದು ಮಾಹಿತಿ ನೀಡಿದ್ದಾರೆ.

ಮುಕ್ತ ಸಂಚಾರ ನೆಟ್‌ವರ್ಕ್ ಅಂಗವಾಗಿ ಕಳೆದ ವರ್ಷ ಕೊಚ್ಚಿಯಲ್ಲಿ ಕೇರಳ ಮೆಟ್ರೋಪಾಲಿಟನ್‌ ಟ್ರಾನ್ಸ್‌ಪೋರ್ಟ್‌ ಅಥಾರಿಟಿ (ಕೆಎಂಟಿಎ) ಮತ್ತು ಬೆಕ್ನ್‌ ಪ್ರತಿಷ್ಠಾನ ಜಂಟಿಯಾಗಿ ಯಾತ್ರಾ ಆ್ಯಪ್‌ ಬಿಡುಗಡೆ ಮಾಡಿತ್ತು. ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆ್ಯಪ್‌ ಬಗ್ಗೆ ಜನರಿಗೆ ಕುತೂಹಲವಿದೆ.

ನಗರದಲ್ಲಿ ಈ ಹಿಂದೆ ಪರಿಚಯಿಸಿದ್ದ ಆ್ಯಪ್‌ ಆಧಾರಿತ ಟಾಕ್ಸಿ ಸೇವೆ ವಿಫಲಗೊಂಡಿದ್ದರಿಂದ ಜನರಲ್ಲಿ ಗೊಂದಲ ಹಾಗೂ ಸಂದೇಹಗಳಿವೆ. 2017ರಲ್ಲಿ ಆ್ಯಪ್‌-ಆಧಾರಿತ ಕ್ಯಾಬ್‌ ಸೇವೆ ನಮ್ಮ ಟೈಗರ್‌ ಬಿಡುಗಡೆ ಮಾಡಿತ್ತು. ಆದರೆ, ಅದು ಯಶಸ್ವಿಯಾಗಲಿಲ್ಲ” ಎಂದು ಹೇಳಿದ್ದಾರೆ.”ಬೆಂಗಳೂರಲ್ಲಿ ಸದ್ಯ ಆಟೋ ಪ್ರಯಾಣದ ಕನಿಷ್ಠ ದರ (2 ಕಿ.ಮೀ. ದೂರದವರೆಗೆ) 30 ರೂ.

ಇದ್ದು, ನಂತರದ ಪ್ರತಿ ಕಿ.ಮೀಗೆ 15 ರೂ. ಇದೆ. ಆದರೆ, ಆ್ಯಪ್‌ ಆಧಾರಿತ ಕ್ಯಾಬ್‌ ಸಂಸ್ಥೆಗಳು ಕನಿಷ್ಟ ದರವಾಗಿ 100 ರೂ. ವಸೂಲು ಮಾಡುತ್ತಿವೆ,” ಎಂದು ಪ್ರಯಾಣಿಕರು ದೂರಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button