ರಾಜ್ಯ

ಒಂದು ವರ್ಷದಲ್ಲಿ ಮದುವೆಯಾಗಬೇಕು: ಷರತ್ತು ವಿಧಿಸಿ ಅತ್ಯಾಚಾರಿಗೆ ಜಾಮೀನು

ಮುಂಬಯಿ: ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂಬ ಕಡ್ಡಾಯ ಷರತ್ತು ವಿಧಿಸಿ 26 ವರ್ಷದ ಆರೋಪಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿರುವ ವಿಲಕ್ಷಣ ಪ್ರಕರಣ ವರದಿಯಾಗಿದೆ.ನಾಪತ್ತೆಯಾಗಿರುವ ಸಂತ್ರಸ್ತೆ ಒಂದು ವರ್ಷದೊಳಗೆ ಪತ್ತೆಯಾದರೆ ಆಕೆಯನ್ನು ಮದುವೆಯಾಗಬೇಕು ಎಂದು ಷರತ್ತು ವಿಧಿಸಿದ ನ್ಯಾ.

ಭಾರತಿ ಡಾಂಗ್ರೆ, ಆರೋಪಿಗೆ ಜಾಮೀನು ನೀಡಿದರು. ”ಷರತ್ತು ಉಲ್ಲಂಘಿಸಿದ ಮರುಕ್ಷಣವೇ ಜಾಮೀನು ಆದೇಶ ಸ್ವಯಂ ರದ್ದಾಗಲಿದೆ,” ಎಂದು ನ್ಯಾಯಮೂರ್ತಿ ಎಚ್ಚರಿಕೆ ನೀಡಿದ್ದಾರೆ.ಆರೋಪಿ ಹಾಗೂ 22 ವರ್ಷದ ಸಂತ್ರಸ್ತೆ ಕೆಲವು ವರ್ಷಗಳಿಂದ ಒಪ್ಪಿತ ಸಂಬಂಧ ಹೊಂದಿದ್ದರು. ಯುವತಿ ಗರ್ಭಿಣಿಯಾದ ವಿಷಯ ಅರಿವಿಗೆ ಬರುತ್ತಿದ್ದಂತೆ ಆರೋಪಿ, ಆಕೆಯಿಂದ ದೂರಾಗುವ ಪ್ರಯತ್ನ ಮಾಡಿದ್ದ.

ಇದರಿಂದ ಆತಂಕಕ್ಕೊಳಗಾದ ಯುವತಿ 2020ರ ಫೆಬ್ರವರಿಯಲ್ಲಿ ಮುಂಬಯಿ ಪೊಲೀಸರಿಗೆ ದೂರು ನೀಡಿ, ಆರೋಪಿ ವಿರುದ್ಧ ಅತ್ಯಾಚಾರ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದರು. ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು ಜೈಲಿಗೆ ಕಳಿಸಿದ್ದರು.ಗರ್ಭಿಣಿಯಾಗಿದ್ದ ಸಂತ್ರಸ್ತೆ ಮನೆಯವರಿಗೆ ವಿಷಯ ತಿಳಿಯುವ ಮುನ್ನವೇ ಮನೆ ಬಿಟ್ಟು ಹೋಗಿದ್ದಳು.

2020ರ ಜ. 27ರಂದು ಮಗುವಿಗೆ ಜನ್ಮ ನೀಡಿದ ಸಂತ್ರಸ್ತೆ, ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾಳೆ.ಕಳೆದ ಎರಡು ವರ್ಷದಿಂದ ಜೈಲಿನಲ್ಲಿರುವ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೊಂಡ ನ್ಯಾಯಾಲಯ, ಸಂತ್ರಸ್ತೆ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿತು. ಮಗುವಿಗೆ ಜನ್ಮ ನೀಡಿದ ಬಳಿಕ ಆಕೆ ಎಲ್ಲಿದ್ದಾಳೆ ಎಂದು ಗೊತ್ತಿಲ್ಲ.

ಎಷ್ಟೇ ಹುಡುಕಿದರೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದರು.ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ, ”ಒಂದು ವರ್ಷದೊಳಗೆ ಸಂತ್ರಸ್ತೆಯನ್ನು ಪತ್ತೆ ಮಾಡಿ, ಮದುವೆಯಾಗಬೇಕು,” ಎಂದು ಷರತ್ತು ವಿಧಿಸಿ ಆರೋಪಿಗೆ ಜಾಮೀನು ನೀಡಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button