ಕ್ರೀಡೆಬೆಂಗಳೂರು

ಐ.ಪಿ.ಎಲ್ : ಲಕ್ನೋ ಸೋಲಿಸಿ ರಾಜಸ್ಥಾನವನ್ನು ಎದುರಿಸಲು ಸಜ್ಜಾದ ಆರ್.ಸಿ.ಬಿ

ಕೋಲ್ಕತ್ತಾ: ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2ನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟರೆ, ಲಕ್ನೋ ಈ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

ಕೋಲ್ಕತ್ತಾದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದರೆ, ಪಂದ್ಯ ಆರಂಭದ ಬಳಿಕ ರನ್ ಮಳೆ ಸುರಿಯಿತು.ಆರ್‌ಸಿಬಿ ನೀಡಿದ 208 ರನ್‍ಗಳ ಬೃಹತ್ ಮೊತ್ತ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಆರಂಭದಿಂದಲೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಾಹುಲ್ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡು 79 ರನ್ (58 ಎಸೆತ, 3 ಬೌಂಡರಿ, 5 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಕೊನೆಯ ಎರಡು ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ಆರ್‌ಸಿಬಿ ಬೌಲರ್‌ಗಳು ಅನಿರೀಕ್ಷಿತ ಜಯ ತಂದುಕೊಟ್ಟು ಈ ಸಲ ಕಪ್ ನಮ್ದೇ ಆಸೆಗೆ ಜೀವ ತುಂಬಿದ್ದಾರೆ. ಈ ಗೆಲುವಿನೊಂದಿಗೆ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನವನ್ನು ಎದುರಿಸಲಿದೆ.

ಬೃಹತ್ ಮೊತ್ತದ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಡಿಕಾಕ್, ರಾಹುಲ್ ಜೋಡಿ ಆರಂಭದಲ್ಲೇ ಎಡವಿತು. 1 ಸಿಕ್ಸ್ ಸಹಿತ ಅಬ್ಬರಿಸುವ ಸೂಚನೆ ಹೊರಡಿಸಿದ ಡಿಕಾಕ್ ಆಟ ಡುಪ್ಲೆಸಿಸ್ ಹಿಡಿದ ಉತ್ತಮ ಕ್ಯಾಚ್‍ನೊಂದಿಗೆ ಅಂತ್ಯವಾಯಿತು. ಬಳಿಕ ಬಂದ ಮನನ್ ವೋಹ್ರಾ, ರಾಹುಲ್ ಜೊತೆಗೂಡಿ ಪವರ್ ಪ್ಲೇನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಆರ್‌ಸಿಬಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಆದರೆ ವೋಹ್ರಾ ಆಟ 19 ರನ್ (11 ಎಸೆತ, 1 ಬೌಂಡರಿ, 2 ಸಿಕ್ಸ್‌ಗೆ ಅಂತ್ಯಗೊಂಡಿತು. ಬಳಿಕ ದೀಪಕ್ ಹೂಡಾ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಪಂದ್ಯವನ್ನು ಗೆಲುವಿಗೆ ಹತ್ತಿರ ಕೊಂಡೊಯ್ಯುತ್ತಿದ್ದಂತೆ ದಾಳಿಗಿಳಿದ ಹಸರಂಗ ಸೂಪರ್ ಸ್ಪೇಲ್‍ಗೆ ಹೂಡಾ ಕ್ಲೀನ್ ಬೌಲ್ಡ್ ಆದರು. ಆದರೆ ಈ ಮೊದಲು 45 ರನ್ (26 ಎಸೆತ, 1 ಬೌಂಡರಿ, 4 ಸಿಕ್ಸ್) ಬಾರಿಸಿ ರಾಹುಲ್ ಜೊತೆ 3ನೇ ವಿಕೆಟ್‍ಗೆ 96 ರನ್ (61 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ಶ್ರಮಪಟ್ಟರು.

ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಡುಪ್ಲೆಸಿಸ್ ಶೂನ್ಯ ಸುತ್ತಿ ಬಂದಷ್ಟೇ ವೇಗವಾಗಿ ಡಗೌಟ್ ಸೇರಿಕೊಂಡರು.

ಆ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟ ತೊಡಗಿದರು. ಇತ್ತ ಪಾಟಿದಾರ್ ಮಾತ್ರ ಪವರ್ ಫುಲ್ ಹಿಟ್‍ಗಳ ಮೂಲಕ ಲಕ್ನೋಗೆ ಆರಂಭದಲ್ಲೇ ಎಚ್ಚರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್ (24 ಎಸೆತ, 2 ಬೌಂಡರಿ) ಸಿಡಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಈ ಜೋಡಿ 66 ರನ್ (46 ಎಸೆತ) ಜೊತೆಯಾಟವಾಡಿ ಮಿಂಚಿತು.

ಪಾಟಿದಾರ್ ಚೊಚ್ಚಲ ಶತಕ:
ಕೊಹ್ಲಿ ಬಳಿಕ ಬಂದ ಮಾಕ್ಸ್‌ವೆಲ್ ಆಟ 1 ಸಿಕ್ಸ್ ಸಹಿತ 9 ರನ್‍ಗಳಿಗೆ ಅಂತ್ಯವಾಯಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದು ಕಡೆ ಪಾಟಿದರ್ ಲಕ್ನೋ ಬೌಲರ್‌ಗಳ ಪ್ರತಿ ಎಸೆತಗಳನ್ನು ಬೌಂಡರಿ, ಸಿಕ್ಸ್ ಸಿಡಿಸುವ ಮೂಲಕ ಘರ್ಜಿಸಲಾರಂಭಿಸಿದರು. ಇನ್ನೊಂದೆಡೆ ಲಕ್ನೋ ಫೀಲ್ಡರ್‌ಗಳು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡರು. ಡೆತ್ ಓವರ್‌ಗಳಂತೂ ದಿನೇಶ್ ಕಾರ್ತಿಕ್ ಮತ್ತು ಪಾಟಿದರ್ ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಲಕ್ನೋ ಬೌಲರ್ ರವಿ ಬಿಷ್ಣೋಯ್ ಎಸೆದ 16ನೇ ಓವರ್‌ನಲ್ಲಿ 2 ಬೌಂಡರಿ, 3 ಸಿಕ್ಸ್ ಸಹಿತ ಬರೋಬ್ಬರಿ 26 ಕಸಿದ ಪಾಟಿದರ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಚೊಚ್ಚಲ ಶತಕ ಬಾರಿಸಿ ಆರ್‌ಸಿಬಿ ಪಾಳಯದಲ್ಲಿ ಹರುಷ ತಂದರು.

ಅಂತಿಮವಾಗಿ ಪಾಟಿದರ್ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 37 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸ್) ಸಹಿತ 5ನೇ ವಿಕೆಟ್‍ಗೆ ಅಜೇಯ 92 ರನ್ (41 ಎಸೆತ) ಜೊತೆಯಾಟವಾಡಿ ರನ್ ಮಳೆ ಸುರಿಸಿತು. ಅಂತಿಮವಾಗಿ ಆರ್‌ಸಿಬಿ ತಂಡ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

Related Articles

Leave a Reply

Your email address will not be published. Required fields are marked *

Back to top button