
ಐಷಾರಾಮಿ ಜೀವನಕ್ಕಾಗಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ 2.10 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, ಹಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬನಶಂಕರಿ 3ನೆ ಹಂತ, ಹೊಸಕೆರೆಹಳ್ಳಿಯ ವೀರಭದ್ರನಗರದ ನಾಗರಾಜು(24) ಮತ್ತು ಶೇಖರ್ ಅಲಿಯಾಸ್ ತಿಪ್ಪೆ(26) ಬಂಧಿತ ಆರೋಪಿಗಳು.ಪಿರ್ಯಾದುದಾರರಾದ ರಮೇಶ್ ಎಂಬುವರು ಏಪ್ರಿಲ್ 29ರಂದು ರಾತ್ರಿ 10.30ರ ಸುಮಾರಿನಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ತಮ್ಮ ಸಂಬಂಧಿಕರ ಊರಾದ ತಮಿಳುನಾಡಿನ ಥಳಿಯ ಬಳಿ ಇರುವ ಸೂಡಸಂದ್ರಕ್ಕೆ ಹೋಗಿ ಅಂಗಾಳ ಪರಮೇಶ್ವರಿ ಜಾತ್ರೆಯನ್ನು ಮುಗಿಸಿಕೊಂಡು ಮೇ 2ರಂದು ಬೆಳಗಿನ ಜಾವ 12.30ರ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದಾರೆ.
ಆ ಸಂದರ್ಭದಲ್ಲಿ ಯಾರೋ ಕಳ್ಳರು ಅಡುಗೆ ಮನೆಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ಅನ್ನು ಕತ್ತರಿಸಿ ಒಳಗೆ ನುಗ್ಗಿ ಬೆಡ್ ರೂಂ ಕಬೋಡ್‍ನಲ್ಲಿ ಇಟ್ಟಿದ್ದಂತಹ ಸುಮಾರು 23 ಗ್ರಾಂ ತೂಕದ ಚಿನ್ನದ ಒಡವೆಗಳು, 150 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, 30 ಸಾವಿರ ಹಣ ಕಳ್ಳತನವಾಗಿರುವುದು ಕಂಡು ಬಂದಿದೆ.
ತಕ್ಷಣ ರಮೇಶ್ ಅವರು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡು ಇಬ್ಬರು ಮನೆಗಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿ, ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಸುಮಾರು 2.10 ಲಕ್ಷ ರೂ. ಬೆಲೆ ಬಾಳುವ ಸುಮಾರು 23 ಗ್ರಾಂ ತೂಕದ ಚಿನ್ನದ ವಡೆವೆಗಳು, 150 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು, ನಗದು ಹಣ 2 ಸಾವಿರ ಹಣ ಹಾಗೂ ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಾದ ನಾಗರಾಜ ಮತ್ತು ಶೇಖರ್ ಹಳೆಯ ಆರೋಪಿಗಳಾಗಿದ್ದು , ಇವರುಗಳ ವಿರುದ್ಧ ವಿಜಯನಗರ, ಗಿರಿನಗರ, ಜೆಪಿ ನಗರ, ಹನುಮಂತ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಗಳ ಬಂಧನದಿಂದ ಗಿರಿನಗರ ಹಾಗೂ ಬಸವನಗುಡಿ ಠಾಣೆಯ ಪ್ರಕರಣಗಳು ಪತ್ತೆಯಾಗಿವೆ.ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಬಿ.ಎಲ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ದೀಪಕ್, ಸಬ್ ಇನ್ಸ್‍ಪೆಕ್ಟರ್ ರಘುನಾಯ್ಕ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ಕೈಗೊಂಡಿರುತ್ತಾರೆ. ಉತ್ತಮ ಕಾರ್ಯವನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ ಅವರು ಶ್ಲಾಘಿಸಿರುತ್ತಾರೆ.