ಅಪರಾಧಪೊಲೀಸ್ರಾಷ್ಟ್ರಿಯ

ಐವರು ಅಧೀನ ಅಧಿಕಾರಿಗಳನ್ನು ಲಾಕಪ್‌ಗೆ ಹಾಕಿದ ಎಸ್‌ಪಿ

ಪಟ್ನಾ: ಕೆಲಸ ತೃಪ್ತಿಕರವಾಗಿಲ್ಲವೆಂದು ಐವರು ಕಿರಿಯ ಸಿಬ್ಬಂದಿಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಲಾಕಪ್‌ನಲ್ಲಿ ಕೂಡಿ ಹಾಕಿದ ಘಟನೆ ಬಿಹಾರದ ನವಾಡಾ ಪಟ್ಟಣದಲ್ಲಿ ನಡೆದಿದೆ. ಈ ಆರೋಪವನ್ನು ಅಧಿಕಾರಿ ಅಲ್ಲಗಳೆದಿದ್ದಾರೆ.

ಆದರೆ ಅದರ ವಿಡಿಯೋ ವೈರಲ್ ಆಗಿದೆ.ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದ್ದು, ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗ್ಲಾ ವಿರುದ್ಧ ತನಿಖೆ ನಡೆಸುವಂತೆ ಬಿಹಾರ ಪೊಲೀಸ್ ಸಂಸ್ಥೆ ಆಗ್ರಹಿಸಿದೆ.

ಪೊಲೀಸ್ ಸಿಬ್ಬಂದಿಯ ಒಕ್ಕೂಟವಾಗಿರುವ ಈ ಸಂಸ್ಥೆಯ ಜಿಲ್ಲಾ ಘಟಕಗಳು ಕೂಡ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.

ಸಬ್ ಇನ್‌ಸ್ಪೆಕ್ಟರ್‌ಗಳಾದ ಶತ್ರುಘ್ನ ಪಾಸ್ವಾನ್ ಮತ್ತು ರಾಮ್‌ರೇಖಾ ಸಿಂಗ್, ಎಎಸ್‌ಐಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ ಉರಾನ್ ಅವರನ್ನು ನವಾಡ ನಗರ ಪೊಲೀಸ್ ಠಾಣೆಯ ಲಾಕಪ್ ಒಳಗೆ ಕೂಡಿ ಹಾಕಿರುವುದು ಠಾಣೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಐವರನ್ನು ಸುಮಾರು ಎರಡು ಗಂಟೆಗಳ ಬಳಿಕ, ಮಧ್ಯರಾತ್ರಿ ಸುಮಾರಿಗೆ ಅವರನ್ನು ಬಿಡುಗಡೆ ಮಾಡಲಾಗಿದೆ.

ನವಾಡದ ಪೊಲೀಸ್ ಮುಖ್ಯಸ್ಥರಾಗಿರುವ ಎಸ್‌ಪಿ ಮಂಗ್ಲಾ, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಇದನ್ನು ಠಾಣಾ ಉಸ್ತುವಾರಿ ವಿಜಯ್ ಕುಮಾರ್ ಸಿಂಗ್ ಕೂಡ ಅನುಮೋದಿಸಿದ್ದಾರೆ.

ಆದರೆ, ಪ್ರಕರಣಗಳ ಪರಿಶೀಲನೆಗಾಗಿ ಸೆ. 8ರ ರಾತ್ರಿ 9 ಗಂಟೆ ವೇಳೆಗೆ ಎಸ್‌ಪಿ ಮಂಗ್ಲಾ ಠಾಣೆಗೆ ಬಂದಿದ್ದರು.

ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಅವರ ಗಮನಕ್ಕೆ ಬಂದಿತ್ತು. ಇದರಿಂದ ತಮ್ಮ ಅಧೀನ ಅಧಿಕಾರಿಗಳ ವಿರುದ್ಧ ಕೋಪಗೊಂಡ ಅವರು, ಐವರನ್ನು ಲಾಕಪ್‌ಗೆ ಹಾಕಿದ್ದಾರೆ ಎನ್ನಲಾಗಿದೆ.

ಅವರು ಯಾವ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದ್ದರು ಎಂಬುದನ್ನು ಮೂಲಗಳು ತಿಳಿಸಿವೆ. ಎಸ್‌ಪಿ ಕೂಡ ಅದರ ಬಗ್ಗೆ ಏನನ್ನೂ ಹೇಳಿಲ್ಲ.

ಅಧಿಕಾರಿಗಳನ್ನು ಲಾಕಪ್‌ಗೆ ತುಂಬಿಸಿದ ವಿಡಿಯೋ ಮರು ದಿನ ವಾಟ್ಸಾಪ್‌ನಲ್ಲಿ ಹರಿದಾಡಿದೆ. ಇದು ಸುಳ್ಳು ಸುದ್ದಿಯಷ್ಟೇ ಎಂದು ಎಸ್‌ಪಿ ನಿರಾಕರಿಸಿದ್ದರು. ಆದರೆ, ಈಗ ಸಿಸಿಟಿವಿ ಕ್ಯಾಮೆರಾದ ದೃಶ್ಯ ಕೂಡ ಹೊರಬಂದಿದೆ.

ಇದನ್ನು ಬಿಹಾರ ಪೊಲೀಸ್ ಸಂಸ್ಥೆಯ ಅಧ್ಯಕ್ಷ ಮೃತ್ಯುಂಜಯ ಕುಮಾರ್ ಸಿಂಗ್ ಗಂಭೀರವಾಗಿ ಪರಿಗಣಿಸಿದ್ದಾರೆ. ಎಸ್‌ಪಿ ಜತೆ ಮಾತನಾಡಲು ಪ್ರಯತ್ನಿಸಿದರೂ, ಅವರು ತಮ್ಮ ಕರೆಯನ್ನು ಸ್ವೀಕರಿಸಲಿಲ್ಲ ಎಂದು ತಿಳಿಸಿದ್ದಾರೆ.

ಬಳಿಕ ಈ ಬಗ್ಗೆ ತನಿಖೆಗೆ ಆಗ್ರಹಿಸಿ ಅವರು ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಭಾಗದ ಪೊಲೀಸ್ ಮುಖ್ಯಸ್ಥರಾಗಿರುವ ಎಸ್‌ಪಿ, ಸಿಸಿಟಿವಿ ದೃಶ್ಯಗಳನ್ನು ಹಾಳು ಮಾಡಿರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

“ಅವರ ನಡೆ ಕಿರಿಯ ಅಧಿಕಾರಿಗಳ ನೈತಿಕತೆಯನ್ನು ಕುಂದಿಸಿದೆ” ಎಂದಿರುವ ಮೃತ್ಯುಂಜಯ ಕುಮಾರ್ ಸಿಂಗ್, ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಹಿರಿಯ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಯ ಜತೆ ವ್ಯವಹರಿಸುವ ವೇಳೆ ‘ಮಿತಿಮೀರಿದ ಕ್ರಮ’ಕ್ಕೆ ಮುಂದಾಗದಂತೆ ಬಿಹಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button