ಐರನ್ ಟ್ಯಾಬ್ಲೆಟ್ ಸೇವಿಸಿ ಸರ್ಕಾರಿ ಶಾಲೆಯ 55 ವಿದ್ಯಾರ್ಥಿಗಳು ಅಸ್ವಸ್ಥ

ಬೆಳಗಾವಿ: ಅನಿಮಿಯ ಮುಕ್ತ ಭಾರತ್ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಕಬ್ಬಿಣದ ಅಂಶದ ಮಾತ್ರೆ ಅಂದರೆ ಐರನ್ ಟ್ಯಾಬ್ಲೆಟ್ ಸೇವಿಸಿ ಸುಮಾರು 55 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದ ಸರ್ಕಾರಿ ಶಾಲೆಯ 239 ಮಕ್ಕಳಿಗೆ ಫಾಲಿಕ್ ಆಸಿಡ್ ಮಾತ್ರೆ ನೀಡಲಾಗಿತ್ತು. ಮಾತ್ರೆ ಸೇವಿಸಿದ ಕೆಲ ಹೊತ್ತಿನಲ್ಲೇ ಕೆಲವು ವಿದ್ಯಾರ್ಥಿಗಳು ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ್ದು ಅಸ್ವಸ್ಥಗೊಂಡಿದ್ದರು.
ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಕ್ಷಣವೇ ಸವದತ್ತಿ ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.ಇನ್ನು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದಕ್ಕೆ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶಾಲೆಯಲ್ಲಿ ನೀಡಿದ ಮಾತ್ರೆ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದಕ್ಕೆ ಪಾಲಕರು ಸಹ ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತಂತೆ ಪ್ರತಿಕ್ರಿಯಿಸಿರುವ ಸವದತ್ತಿ ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ ಚಿತ್ತರಗಿ, ಮಕ್ಕಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾವುದೇ ಆತಂಕ ಪಡುವ ಅಗತ್ಯ ಇಲ್ಲ.
ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಕೆಲವು ವಿದ್ಯಾರ್ಥಿಗಳನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನುಳಿದ ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.