
ಖಡಕ್ ಐಪಿಎಸ್ ಅಧಿಕಾರಿ ಎಂದು ಗುರುತಿಸಿಕೊಂಡು ಆಗಾಗ ಸುದ್ದಿಯಲ್ಲಿರುವ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ನಿರ್ದೇಶಕಿ ಡಿ.ರೂಪಾ ಮುದ್ಗಲ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಸರ್ಕಾರದ ಮುಖ್ಯ ಕಾರ್ಯದಶಿಗೆ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ದೂರು ನೀಡಿದ್ದಾರೆ.
ಐದು ಲಕ್ಷಕ್ಕೂ ಮೇಲ್ಪಟ್ಟ ಟೆಂಡರ್ ನೀಡಬೇಕಾದರೆ ನಿಗಮದ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರಬೇಕು ಎಂಬ ನಿಯಮ ಇದ್ದರೂ ಆರು ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿದ್ದಾರೆ ಎಂದು ಆರು ಪುಟಗಳ ದೂರಿನಲ್ಲಿ ಉಲೇಖಿಸಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಯಾಗಿರುವ ಡಿ.ರೂಪಾ ಅವರಿಗೆ 76ಕ್ಕೂ ಹೆಚ್ಚು ನೋಟಿಸ್ ನೀಡಿದ್ದರೂ ಯಾವುದಕ್ಕೂ ಉತ್ತರಿಸಿರಲಿಲ್ಲ. ವಾರಕ್ಕೆ ಎರಡು ದಿನ ಮಾತ್ರ ಕಚೇರಿಗೆ ಬರುತ್ತಿದ್ದು, ಕಚೇರಿ ಕಡತಗಳನ್ನು ಮನೆಗೆ ತರಿಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಹೈದಾರಾಬಾದ್ ಶೋರೂಂಗೆ ಮಾಡಿದ ವೆಚ್ಚ, ಹಂಪಿಗೆ ಕೇಂದ್ರ ಸರ್ಕಾರದಿಂದ ಬಂದ ಅನುದಾನದ ಬಗ್ಗೆ ನಿಗಮದ ಗಮನಕ್ಕೆ ತಾರದೆ ಟೆಂಡರ್ ನೀಡಿರುವುದು ಸೇರಿದಂತೆ ಸುಮಾರು 19 ಪ್ರಕರಣಗಳನ್ನು ದೂರಿನಲ್ಲಿ ತಿಳಿಸಿರುವ ರಾಘವೇಂದ್ರ ಶೆಟ್ಟಿ, ಸುಮಾರು 6 ಕೋಟಿ ರೂ .ನಷ್ಟು ಭ್ರಷ್ಟಾಚಾರ ನಡೆದಿರಬಹುದು. ಈ ಬಗ್ಗೆ ಕಡತ ಕೇಳಿದರೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕೂಡಲೇ ಸಂಬಂಧಿಸಿದ ಕಡತಗಳನ್ನು ಮುಟ್ಟುಗೋಲು ಹಾಕಿಕೊಂಡು ನಿರ್ದೇಶಕರ ವಿರುದ್ಧ ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದಾರೆ.