Accident

ಐದು ವರ್ಷ ಪಿಎಫ್‌ಐ ನಿಷೇಧ

ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿ ಹಣ ಪೂರೈಕೆ ಹಾಗೂ ಸಮಾಜಘಾತುಕ ಕೃತ್ಯಗಳಲ್ಲಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಅಂಗಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ದೇಶಾದ್ಯಂತ ೫ ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರ ಇಂದು ಮಹತ್ವದ ಆದೇಶ ಹೊರಡಿಸಿದೆ,ಕಳೆದ ೫ ದಿನಗಳ ಅವಧಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಹಠಾತ್ ದಾಳಿ ಮಾಡಿ ಪಿಎಫ್‌ಐ ಸಂಘಟನೆಗೆ ಸೇರಿದ ನೂರಾರು ಮುಖಂಡರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ ಬೆನ್ನಲ್ಲೆ ಕೇಂದ್ರ ಈ ಆದೇಶ ಹೊರ ಬಿದ್ದಿದೆ.

ಪಿಎಫ್‌ಐ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ನೀಡಿರುವ ವಿವರಣೆಯಲ್ಲಿ ಕರ್ನಾಟಕ ಸರ್ಕಾರದ ಶಿಫಾರಸ್ಸು ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯನ್ನು ಉಲ್ಲೇಖಿಸಿದೆ. ಅಲ್ಲದೆ ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಇತರ ರಾಜ್ಯಗಳು ಪಿಎಫ್‌ಐ ಸಂಘಟನೆಗೆ ಅಂಕುಶ ಹಾಕುವಂತೆ ಕೇಂದ್ರದ ಮೇಲೆ ಒತ್ತಡ ಹೇರಿದ್ದನ್ನು ಉಲ್ಲೇಖಿಸಲಾಗಿದೆ.

ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನು ಬಾಹಿರ ಸಂಘಟನೆಯಾಗಿರುವುದರಿಂದ ಅಂಕುಶ ಹಾಕಲು ನಿಷೇಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ಉಂಟುಮಾಡಿ ಶಾಂತಿಭಂಗ, ಕೋಮುಸೌಹಾರ್ದತೆಗೆ ಭಂಗ ಮಾಡಿ ದೇಶದಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ.

ಅಲ್ಲದೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ದುರ್ಬಲಗೊಳಿಸುವ ಚಟುವಟಿಕೆಯಲ್ಲಿ ನಿರತವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.ಪಿಎಫ್‌ಐ ಜತೆಗಿದ್ದ ನ್ಯಾಷನಲ್ ಕಾನ್ಫಿಡರೇಷನ್ ಆಪ್ ಹ್ಯೂಮನ್ ರೈಡ್ಸ್ ಆರ್ಗನೈಜೇಷನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಷನ್, ರಿಹಾಬ್ ಫೌಂಡೇಷನ್, ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ ಮತ್ತು ಆಲ್‌ಇಂಡಿಯಾ ಹಿಮಾಮ್ ಕೌನ್ಸಿಲ್ ಸಂಘಟನೆಗಳನ್ನು ನಿಷೇಧಿಸಿದೆ.

ಪಿಎಫ್‌ಐನ ಕೆಲವು ಸಂಸ್ಥಾಪಕ ಸದಸ್ಯರು ಸಿಮಿ ನಾಯಕರು ಮತ್ತು ಪಿಎಫ್‌ಐ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾ ದೇಶದೊಂದಿಗೆ ಸಂಪರ್ಕ ಹೊಂದಿದ್ದು, ಇವೆರೆಡೂ ನಿಷೇಧಿತ ಸಂಘಟನೆಗಳಾಗಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ದೇಶದಲ್ಲಿ ಅಭದ್ರತೆ, ಅಶಾಂತಿ ಉತ್ತೇಜಿಸುವ ಮೂಲಕ ಒಂದು ಸಮುದಾಯದ ಮೂಲಭೂತೀಕರಣವನ್ನು ಹೆಚ್ಚಿಸಲು ರಹಸ್ಯವಾಗಿ ಕೆಲಸ ಮಾಡುತ್ತಿವೆ.

ಅದರಲ್ಲೂ ಪಿಎಫ್‌ಐ ಕಾರ್ಯಕರ್ತರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಸೇರಿರುವುದು ಸಾಬೀತಾಗಿದೆ.ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾನೂನು ಬಾಹಿರ ಸಂಘವೆಂದು ಘೋಷಿಸುವುದು ಅನಿವಾರ್ಯವಾಗಿದ್ದು, ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.ಪಿಎಫ್‌ಐ ಹಿನ್ನೆಲೆ೨೦೨೧ರಲ್ಲಿ ಕೇರಳ ಸಂಜೀತ್, ೨೦೧೯ ರಲ್ಲಿ ತಮಿಳುನಾಡಿನಲ್ಲಿ ವಿ. ರಾಮಲಿಂಗಂ, ೨೦೨೧ರಲ್ಲಿ ಕೇರಳದಲ್ಲಿ ನಂದು, ೨೦೧೮ ಕೇರಳದಲ್ಲಿ ಅಭಿಮನ್ಯು, ೨೦೧೭ರಲ್ಲಿ ವಿಬಿನ್, ೨೦೧೭ ಕರ್ನಾಟಕದಲ್ಲಿ ಶರತ್, ೨೦೧೬ ಕರ್ನಾಟಕ ಆರ್. ರುದ್ರೇಶ್, ೨೦೧೬ ಪ್ರವೀಣ್ ಪೂಜಾರಿ, ೨೦೧೬ ತಮಿಳುನಾಡು ಶಶಿಕುಮಾರ, ೨೦೨೨ ಕರ್ನಾಟಕ ಪ್ರವೀಣ್ ನೆಟ್ಟಾರು ಹತ್ಯೆಗಳೂ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಲ್ಲಿ ಪಿಎಫ್‌ಐ ಶಾಮೀಲಾಗಿದೆ.

ಸಾರ್ವಜನಿಕ ನೆಮ್ಮದಿಗೆ ಭಂಗ ತರುವುದು ಹಾಗೂ ಭಯ ಹುಟ್ಟುಹಾಕುವ ಉದ್ದೇಶವನ್ನು ಪಿಎಫ್‌ಐ ಹೊಂದಿದೆ.

ಹವಾಲಾ ಮೂಲಕ ಅಕ್ರಮ ಹಣವರ್ಗಾವಣೆಯಲ್ಲೂ ಭಾಗಿಯಾಗಿದ್ದು, ದೇಶದ ಒಳಗೆ ಮತ್ತು ಹೊರಗಿನಿಂದ ಹಣ ಸಂಗ್ರಹಿಸಿ ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿ ಅಪರಾಧ ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button