
ಬೆಂಗಳೂರು: ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೊ ಸ್ಟೇಷನ್ ಬಳಿ ನಿರ್ಮಾಣಗೊಂಡಿರುವ ಐಕಿಯ ಫರ್ನಿಚರ್ ಮಳಿಗೆಗೆ ಭಾನುವಾರ ಜನಸಾಗರವೇ ಹರಿದು ಬಂದಿತ್ತು. ತಿರುಪತಿ ದೇಗುಲದಲ್ಲಿ ಸರದಿಯಲ್ಲಿ ನಿಲ್ಲುವಂತೆ ಜನರು ಕಾದು ನಿಂತಿದ್ದರು. ಮಳಿಗೆ ಒಳಗೆ ಪ್ರವೇಶ ಪಡೆಯಲು ಕನಿಷ್ಠ 2-3 ಗಂಟೆ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು.
ತುಮಕೂರು ರಸ್ತೆಯ ನಾಗಸಂದ್ರ ಮೆಟ್ರೋ ಸ್ಟೇಷನ್ ಬಳಿ ನಿರ್ಮಾಣಗೊಂಡಿರುವ ಐಕಿಯಾ ಶಾಪಿಂಗ್ ಮಾಲ್ಗೆ ಬೆಂಗಳೂರಿನ ಜನತೆ ಮುಗಿಬಿದ್ದಿದ್ದಾರೆ. ವೀಕೆಂಡ್ ಹಿನ್ನೆಲೆಯಲ್ಲಿ ಜನರು ಶಾಪಿಂಗ್ ಮಾಡಲು ಐಕಿಯಾ ಮಳಿಗೆಗೆ ಕಿಕ್ಕಿರಿದಿದ್ದಾರೆ. ಹೀಗಾಗಿ ನಾಗಸಂದ್ರ ಮೆಟ್ರೋ ನಿಲ್ದಾಣದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.

ಮೆಟ್ರೋ ನಿಲ್ದಾಣದ ಬಳಿಯೇ ಸಾವಿರಾರು ಜನ ಸೇರಿದ್ದು, ಒಂದು ರೀತಿ ಬೃಹತ್ ಜಾತ್ರೆ ನಿರ್ಮಾಣಗೊಂಡಿದೆ. ಕೆಲವರು ತಮ್ಮ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ರಸ್ತೆಯ ಅಕ್ಕ-ಪಕ್ಕದಲ್ಲಿಯೇ ನಿಲ್ಲಿಸಿ ಐಕಿಯಾ ಸ್ಟೋರ್‌ಗೆ ಹೋಗಿದ್ದ ಕಾರಣ ಸಂಚಾರಕ್ಕೆ ಅಡಚಣೆಯಾಗಿತ್ತು. ಅಲ್ಲದೆ, ಮೇಲ್ಸೇತುವೆಯಲ್ಲಿ ಭಾರೀ ವಾಹನಗಳ ಸಂಚಾರ ನಿಲ್ಲಿಸಿದ್ದು, ಸರ್ವೀಸ್ ರಸ್ತೆಯಲ್ಲೇ ಸಾಗಬೇಕಿದೆ. ಹೀಗಾಗಿ ಮತ್ತಷ್ಟು ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಹಾಗೂ ಜನ ಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಐಕಿಯಾಗೆ ಜನಸಾಗರದ ಸುಗ್ಗಿ; ಸ್ಥಳೀಯರಿಗೆ ಕಿರಿಕಿರಿ
‘ಹೆಚ್ಚು ವಾಹನ ಚಂಚಾರವಿರುವ ಪ್ರದೇಶದಲ್ಲೇ ಐಕಿಯಾ ಮಳಿಗೆ ನಿರ್ಮಾಣವಾಗಿದೆ. ಆದರೆ, ಸೂಕ್ತ ಪಾರ್ಕಿಂಗ್ ಹಾಗೂ ಇತರೆ ವ್ಯವಸ್ಥೆ ಇಲ್ಲದ ಕಾರಣ ಟ್ರಾಫಿಕ್ ಜಾಮ್ ಆಗುತ್ತಿದೆ. ಇದರಿಂದ ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ. ಮಳಿಗೆಗೆ ಬರುವ ಜನ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದರಿಂದ ತೋಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಮೆಟ್ರೊದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ನಾಗಸಂದ್ರ ಮೆಟ್ರೊ ನಿಲ್ದಾಣ ದಿನವಿಡೀ ತುಂಬಿ ತುಳುಕಿತ್ತು.ನಾಗಸಂದ್ರ ಮೆಟ್ರೊ ನಿಲ್ದಾಣ ಮೂಲಕ ಭಾನುವಾರ ಬರೋಬ್ಬರಿ 35,581ಜನರು ಪ್ರಯಾಣಿಸಿದರು (ಬೆಳಗ್ಗೆ 5ರಿಂದ ಸಂಜೆ 6ರವರೆಗೆ). ಈ ಮೆಟ್ರೊ ನಿಲ್ದಾಣದಲ್ಲಿ ದಿನಕ್ಕೆ ಸರಾಸರಿ 13000 ಜನರಷ್ಟೇ ಸಂಚರಿಸುತ್ತಿದ್ದರು.
ಇದು ಕೇವಲ ಗೃಹೋಪಯೋಗಿ ವಸ್ತುಗಳ ಸ್ಟೋರ್
ಜೂನ್ 22 ರಂದು ನಗರದ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿ ಗೃಹಪಯೋಗಿ ವಸ್ತುಗಳ ಐಕಿಯಾ ಶಾಪಿಂಗ್ ಮಾಲ್ ಪ್ರಾರಂಭವಾಗಿದ್ದು, ಇದು ಕೇವಲ ಗೃಹೋಪಯೋಗಿ ವಸ್ತುಗಳ ಮಾಲ್ ಆಗಿದೆ. ಈ ಸ್ಟೋರ್‌ನಲ್ಲಿ ಸಿನಿಮಾ ಹಾಲ್ ಅಥವಾ ಇತರೆ ವಸ್ತುಗಳು ಲಭ್ಯವಿಲ್ಲ. ಹಾಗಾಗಿ ಕೇವಲ ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವವರು ಮಾತ್ರವೇ ಮಾಲ್ಗೆ ಬರುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಐಕಿಯಾ ಮಾಲ್ ಗೆ ಉಚಿತ ಬಸ್ ವ್ಯವಸ್ಥೆ
ಐಕಿಯಾ ಮಾಲ್ ನಾಗಸಂದ್ರ ಮೆಟ್ರೋ ನಿಲ್ದಾಣದ ಹಿಂಭಾಗದಲ್ಲಿಯೇ ಇದ್ದು, ಸಾರ್ವಜನಿಕರು ಮೆಟ್ರೋ ರೈಲನ್ನು ಉಪಯೋಗಿಸಲು ಕೋರಲಾಗಿದೆ. ಪ್ರಸ್ತುತ ಪೀಣ್ಯ ಫ್ಲೈಓವರ್ ನಲ್ಲಿ ಲಘು ವಾಹನಗಳು ಮಾತ್ರ ಸಂಚರಿಸಲು ಅವಕಾಶವಿರುವುದರಿಂದ, ಭಾರಿ ಗಾತ್ರದ ವಾಹನಗಳು ಹಾಗೂ ಬಸ್ಸುಗಳು ಸರ್ವಿಸ್ ರಸ್ತೆಯಲ್ಲಿ ಬರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಐಕಿಯಾ ಮಾಲ್ ಒಳಗಡೆ ಸುಮಾರು 1400 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ವಾಹನಗಳ ಪಾರ್ಕಿಂಗ್ ಸಲುವಾಗಿ ಮಾದಾವರ ಬಳಿ BIEC ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಐಕಿಯಾ ಮಾಲ್ ಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನ ಐಕಿಯಾ ಮಳಿಗೆ 4,60,000 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದು ದೇಶದಲ್ಲಿರುವ ಐಕಿಯಾದ ಅತೀ ದೊಡ್ಡ ಮಳಿಗೆಯಾಗಿದೆ. ದೇಶಾದ್ಯಂತ ಜನರನ್ನು ಸೆಳೆಯಲು ಇನ್ನೂ ಹೆಚ್ಚಿನ ಸಂಖ್ಯೆಯ ದೊಡ್ಡ ಗಾತ್ರದ ಸ್ಟೋರ್‌ಗಳು ಮತ್ತು ಮಾಲ್‌ಗಳಲ್ಲಿ ಸಣ್ಣ ಔಟ್‌ಲೆಟ್‌ಗಳನ್ನು ತೆರೆಯುವುದಾಗಿ ಕಂಪನಿ ತಿಳಿಸಿದೆ.