
ಕರ್ನಾಟಕ ಹೈಕೋರ್ಟ್ ನ್ಯಾಯೂಮೂರ್ತಿ ಎಚ್. ಪಿ. ಸಂದೇಶ್ ಹೇಳಿಕೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದೆ.
“ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡ ಹಿನ್ನಲೆಯಲ್ಲಿ ನಿನ್ನ ವರ್ಗಾವಣೆಯಾದೀತು ಹುಷಾರಾಗಿರು ಎಂದು ನ್ಯಾಯಮೂರ್ತಿಯೊಬ್ಬರು ನನಗೆ ಬೆದರಿಕೆ ಒಡ್ಡಿದ್ದಾರೆ’ ಎಂದು ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಮೇಲೆ ದಶಕದ ಹಿಂದೆ ಬಳ್ಳಾರಿ ಗಣಿ ಅಕ್ರಮಗಳಿಗೆ ಸಹಕರಿಸಿದ ಆರೋಪಗಳೂ ಸೇರಿದಂತೆ ಹಲವು ಗುರುತರ ಆರೋಪಗಳಿವೆ ಎಂದು ಹೇಳಿದ್ದಾರೆ.
ಈಗ ಅವರು ರಾಜ್ಯ ಎಸಿಬಿಯ ಮುಖ್ಯಸ್ಥರು. ಇವರ ವಿರುದ್ಧವೇ ಇತ್ತೀಚೆಗೆ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಕಿಡಿ ಕಾರಿದ್ದು ಮತ್ತು ಈ ಭ್ರಷ್ಟರೆಲ್ಲಾ ತನ್ನನ್ನೇ ವರ್ಗಾವಣೆ ಮಾಡಿಸುವಷ್ಟು ಸಶಕ್ತರು ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ನ್ಯಾಯಾಂಗದ ಇತಿಹಾಸದಲ್ಲಿ ಹೀಗೆಯೇ ನಿಷ್ಟುರವಾಗಿ ಮತ್ತು ನ್ಯಾಯಯುತವಾಗಿ ನ್ಯಾಯಾಂಗದ ಜವಾಬ್ದಾರಿ ನಿರ್ವಹಿಸುತ್ತಿದ್ದ ಸತ್ಯನಾರಾಯಣ, ರಮೇಶ್‌ರಂತಹ ನ್ಯಾಯಮೂರ್ತಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿದ ಕೆಟ್ಟ ಉದಾಹರಣೆಗಳಿವೆ.
ಪ್ರಾಮಾಣಿಕ ಮತ್ತು ನ್ಯಾಯಪರ ನ್ಯಾಯಮೂರ್ತಿಗಳ ವರ್ಗಾವಣೆಗಳಿಂದ ನಷ್ಟಕ್ಕೊಳಗಾಗುವುದು ಅಂತಿಮವಾಗಿ ರಾಜ್ಯದ ಜನತೆಯೇ. ಈ ಬಾರಿ ಹಾಗೆ ಅಗದಂತೆ ಈಗಿನ ಪರಮಭ್ರಷ್ಟ ಸರ್ಕಾರ ಮತ್ತು ಅಧಿಕಾರರೂಢ ನೀಚ ರಾಜಕಾರಣಿಗಳು ನೋಡಿಕೊಳ್ಳಬೇಕು ಎಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದ್ದಾರೆ.
ಇದೇ ಸಮಯದಲ್ಲಿ ಕಳಂಕಿತ ವ್ಯಕ್ತಿಯೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥನಾಗಿರುವುದು ಅಕ್ಷಮ್ಯ, ನಾಚಿಕೆಗೇಡು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಭ್ರಷ್ಟ ಪೊಲೀಸ್ ಅಧಿಕಾರಿಯಾಗಿರುವ ಸೀಮಂತ್ ಕುಮಾರ್ ಸಿಂಗ್‌ರನ್ನು ಈ ಕೂಡಲೇ ಎಸಿಬಿಯಿಂದ ತೊಲಗಿಸಿ ಪ್ರಾಮಾಣಿಕ ಅಧಿಕಾರಿಯೊಬ್ಬರನ್ನು ಆ ಸ್ಥಾನಕ್ಕೆ ನೇಮಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸರ್ಕಾರವನ್ನು ಆಗ್ರಹಿಸಿದೆ.
ಭ್ರಷ್ಟ ಮತ್ತು ನಾಲಾಯಕ್ ಸಂಸ್ಥೆ ಆಗಿರುವ ಎಸಿಬಿಯನ್ನು ರದ್ದು ಮಾಡಿ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಹೋರಾಟ ಮತ್ತು ಅಧಿಕಾರದ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮಾಡಲಿದೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.
ನ್ಯಾಯಾಂಗದ ಮೇಲೆಯೇ ದುಷ್ಪ್ರಭಾವ ಬೀರುವ ಭ್ರಷ್ಟ ವ್ಯವಸ್ಥೆಯ ಕುರಿತು ಮಾತನಾಡಿರುವ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಮಾತುಗಳನ್ನು ರಾಜ್ಯದ ಹಿತದೃಷ್ಟಿಯಿಂದ ಗಂಭೀರವಾಗಿ ಆಲಿಸಬೇಕು ಮತ್ತು ಅವರಿಗೆ ನೈತಿಕ ಬೆಂಬಲ ನೀಡಬೇಕು ಎಂದು ರಾಜ್ಯದ ಜನತೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಮಾಡಿದೆ.