ಎಸಿಬಿಯಿಂದ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಬೆಂಗಳೂರು ನಗರ ವಿಭಾಗದಲ್ಲಿ ದಾಖಲಾಗಿದ್ದ ಪ್ರಮುಖ ಪ್ರಕರಣಗಳು ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಕೇಸ್ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಲೋಕಾಯುಕ್ತಕ್ಕೆ ಅಧಿಕಾರ ಬಂದ ಮೇಲೆ ಇದೀಗ ಎಸಿಬಿಯು ನಗರ ಘಟಕದಲ್ಲಿರುವ ೩೫೨ ತನಿಖಾ ಹಂತದ ಕಡತ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದೆ. ಅದರಲ್ಲೂ ಪ್ರಮುಖ ಪ್ರಕರಣಗಳಾದ ಶಾಸಕ ಜಮೀರ್ ಅಹಮ್ಮದ್ ಮನೆ ಮೇಲೆ ದಾಳಿ, ಬಿಬಿಎಂಪಿ ಕಚೇರಿಯ ಮೇಲೆ ದಾಳಿ, ಬಿಡಿಎ ಕಚೇರಿಯ ಮೇಲೆ ದಾಳಿ ಸೇರಿದಂತೆ ಪ್ರಮುಖ ೩೭ ಕಡತಗಳು ಇದೀಗ ಲೋಕಾಯುಕ್ತ ಕೈ ಸೇರಿವೆ.
ಇದೀಗ ಪ್ರಮುಖ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿರುವ ಲೋಕಾಯುಕ್ತ ಅಧಿಕಾರಿಗಳು ಸಂಬಂಧಪಟ್ಟ ವ್ಯಕ್ತಿಗಳಿಗೆ ಅಗತ್ಯ ದಾಖಲೆ ಒದಗಿಸುವಂತೆ ನೋಟಿಸ್ ನೀಡಲು ಮುಂದಾಗಿದ್ದಾರೆ. ಕಳೆದ ಒಂದು ವಾರದಿಂದಲೂ ಸತತವಾಗಿ ಫೈಲ್‌ಗಳು ವರ್ಗಾವಣೆಯಾಗಿದ್ದು, ಎಲ್ಲ ಫೈಲ್‌ಗಳ ಮೇಲುಸ್ತುವಾರಿಯನ್ನು ಲೋಕಾಯುಕ್ತ ಎಸ್‌ಪಿ ಅಶೋಕ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಿದೆ. ತನಿಖಾ ಹಂತದಲ್ಲಿರುವ ಪ್ರಕರಣಗಳು ಹಾಗೆಯೇ ಇದ್ದವು. ಇದೀಗ ಲೋಕಾಯುಕ್ತಕ್ಕೆ ತನಿಖಾ ಫೈಲ್‌ಗಳು ವರ್ಗಾವಣೆ ಆಗಿರುವುದರಿಂದ ಮುಂದಿನ ದಿನದಲ್ಲಿ ಕನ್ವಿಕ್ಷನ್ ರೇಟ್ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.
ಲೋಕಾಯುಕ್ತ ಅಧಿಕಾರಿಗಳ ಕೈ ಸೇರಿರುವ ಕಡತಗಳ ಪ್ರತಿ ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಇದೀಗ ತ್ವರಿತಗತಿಯಲ್ಲಿ ಆರೋಪಿಗಳನ್ನು ಜೈಲಿಗಟ್ಟಿ ಶಿಕ್ಷೆ ಕೊಡಿಸುವಂತಹ ಕೆಲಸಕ್ಕೆ ಕೈ ಹಾಕಿದ್ದಾರೆ.
ಒಟ್ಟಿನಲ್ಲಿ ಎಸಿಬಿಯಿಂದ ನೂರಾರು ಕೇಸುಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದು, ಮುಂದಿನ ದಿನದಲ್ಲಿ ಪ್ರಕರಣಗಳು ಯಾವ ಹಂತ ತಲುಪಲಿವೆ ಎಂಬುದನ್ನು ಕಾದುನೋಡಬೇಕು.