ಎಲ್ಲಾ ವಾರ್ಡ್‌ಗಳಲ್ಲೂ ಮೀನು ಮಾರಾಟ ಕೇಂದ್ರ ಆರಂಭ

ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲೂ ಮೀನು ಮಾರಾಟ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಒಳನಾಡು ಮೀನು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನಲ್ಲಿ ಮೀನಿಗೆ ಸಾಕಷ್ಟು ಬೇಡಿಕೆ ಇದೆ. ಹಾಗಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳೂ ಮೀನು ಮಾರಾಟ ಔಟ್‌ಲೆಟ್ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಬೆಂಗಳೂರಿನಲ್ಲಿ ಖಾಸಗಿಯವರು ಮೀನು ಮಾರಾಟ ಅಂಗಡಿಗಳನ್ನು ಆರಂಭಿಸಲು ಮುಂದಾದರೆ ಅವರಿಗೂ ಜಾಗದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಮೀನು ಮೊದಲಿನಿಂದಲೂ ಮನುಷ್ಯನ ಆಹಾರ. ಮೀನು ಸಸ್ಯಹಾರಿ ಪ್ರಾಣಿ, ಆದರೆ ಮೀನು ತಿನ್ನುವವರು ಮಾಂಸಹಾರಿಗಳು.
ಕೆಲವು ದೇಶಗಳಲ್ಲಿ ಮೀನು ತಿನ್ನುವುದನ್ನು ಸಸ್ಯಹಾರ ಎಂದು ಹೇಳುತ್ತಾರೆ ಎಂದರು.ಮೀನುಗಾರಿಕೆಯಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ಒಳನಾಡು ಮೀನುಗಾರಿಕೆಯಲ್ಲಿ ಹೊಸ ಸಂಶೋಧನೆ ನಡೆಸಿ, ಹೊಸ ತಳಿಗಳಪ್ರಯೋಗ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ ಎಂದರು.
ಒಳನಾಡು ಮೀನುಗಾರಿಕೆ ಜತೆಗೆ ಸಮುದ್ರ ಮೀನುಗಾರಿಕೆಗೂ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಆಳ ಮೀನುಗಾರಿಕೆಯಲ್ಲಿ ಉತ್ಕೃಷ್ಟ ಮೀನುಗಳು ದೊರಕುತ್ತವೆ ಹಾಗಾಗಿ ಪ್ರಧಾನಮಂತ್ರಿಗಳ ಮೀನುಗಾರರ ಯೋಜನೆಯಡಿ ರಾಜ್ಯದಲ್ಲಿ ೧೦೦ ಆಳಸಮುದ್ರ ಮೀನುಗಾರಿಕೆಯ ಹಡಗುಗಳನ್ನು ಒದಗಿಸಲು ನಿರ್ಧರಿಸಿದ್ದೇವೆ.
ಇದರಲ್ಲಿ ಶೇ. ೪೦ ರಷ್ಟು ಸಬ್ಸಿಡಿ ಇದೆ. ಮೀನುಗಾರರಿಗೆ ಅಗತ್ಯವಾದ ಡಿಸೇಲ್ ಜತೆಗೆ ಸೀಮೆಎಣ್ಣೆ ಒದಗಿಸಲು ನಿರ್ಧರಿಸಲಾಗಿದೆ. ಪ್ರವಾಹದಲ್ಲಿ ಹಡಗುಗಳಿಗೆ ಹಾನಿಯಾಗಿದ್ದರೆ ಅವುಗಳ ರಿಪೇರಿಗೆ ಅನುದಾನ ನೀಡಲಾಗುವುದು ಎಂದರು.
ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಒಂದು ಕೆರೆಯನ್ನು ಮೀನುಗಾರಿಕೆಗೆ ನೀಡಲಾಗುವುದು. ಮೀನುಗಳ ಬಲೆಯನ್ನು ೩೦೦ ಜನರಿಗೆ ನೀಡಲಾಗುತ್ತಿದ್ದು.
ಇದನ್ನು ೧೦೦೦ ಜನರಿಗೆ ಹೆಚ್ಚಿಸಬೇಕು ಎಂದು ಅವರು ಮೀನುಗಾರಿಕೆ ಇಲಾಖೆಗೆ ಸಲಹೆ ಮಾಡಿದರು.ಆಂಧ್ರಪ್ರದೇಶದಲ್ಲಿ ಮೀನುಗಾರಿಕೆ ಸಾಕಷ್ಟು ಅಭಿವೃದ್ಧಿಯಾಗಿದೆ.
ಅಲ್ಲಿಗೆ ಹೋಗಿ ಅಧ್ಯಯನ ಮಾಡಿ ರಾಜ್ಯದಲ್ಲೂ ಮೀನುಗಾರಿಕೆ ಮಟ್ಟ ಹೆಚ್ಚಿಸುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಮೀನುಗಾರರ ಕಲ್ಯಾಣಕ್ಕೂ ಸರ್ಕಾರ ಒತ್ತು ನೀಡಿದೆ. ಮೀನುಗಾರರಿಗೆ ೫ ಸಾವಿರ ಮನೆಗಳನ್ನು ಜನವರಿ ಅಂತ್ಯದೊಳಗೆ ನಿರ್ಮಿಸಿ ನೀಡಲಾಗುವುದು.
ಹಾಗೆಯೇ ೧ ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲಾಗುವುದು. ಇದಕ್ಕೆ ೪೦ ಕೋಟಿ ರೂ. ವೆಚ್ಚವಾಗಲಿದ್ದು, ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಹೇಳಿದರು.ಸಾವಿರ ಮೀನುಗಾರರ ಸಂಘಗಳಿಗೆ ಸಹಾಯಧನ ೩ ರಿಂದ ೫ ಲಕ್ಷ ರೂ.ಗಳವರೆಗೂ ಸರ್ಕಾರ ನೀಡುತ್ತಿದೆ.
ಈ ಮೀನುಗಾರಿಕೆ ವಲಯ ಅಭಿವೃದ್ಧಿಯಾದರೆ ದೇಶದ ಆರ್ಥಿಕತೆಯೂ ಮುಂದುವರೆಯುತ್ತದೆ. ಪ್ರಧಾನಿ ಮೋದಿ ಅವರು ಹೇಳಿದಂತೆ ೫ ಮಿಲಿಯನ್ ಡಾಲರ್ ಆರ್ಥಿಕತೆಯಲ್ಲಿ ಶೇ. ೧ ರಷ್ಟು ಬೆಳವಣಿಗೆ ಮೀನುಗಾರಿಕೆ ವಲಯದಿಂದ ಆಗಲಿ ಎಂದರು.ಮೀನುಗಾರಿಕೆಯಿಂದ ಹೆಚ್ಚು ಹೆಚ್ಚು ಆರ್ಥಿಕತೆ ಮತ್ತು ಉದ್ಯೋಗಗಳು ಬೆಳೆಯುತ್ತವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಹಂಗಾರ, ಸಚಿವರುಗಳಾದ ಡಾ. ಸಿ.ಎನ್., ಅಶ್ವತ್ಥ್‌ನಾರಾಯಣ, ಬೈರತಿ ಬಸವರಾಜು, ಕೋಟಾ ಶ್ರೀನಿವಾಸಪೂಜಾರಿ, ಬಿ.ಸಿ.ನಾಗೇಶ್, ಫ್ರೀಡಂ ಹ್ಯಾಪ್ ಸಂಸ್ಥಾಪಕ ಡಿ.ಎಸ್. ಸುದೀರ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಂ ಮತ್ತಿತರರು ಉಪಸ್ಥಿತರಿದ್ದರು.