ಎಲ್ಲವನ್ನೂ ಇಲ್ಲಿಗೆ ಬಿಡಿ, ಕೋಮು ಸಾಮರಸ್ಯ ಹಾಳು ಮಾಡಬೇಡಿ: ಬಿಎಸ್‌ವೈ ಖಡಕ್ ಎಚ್ಚರಿಕೆ

ಎಲ್ಲವನ್ನೂ ಇಲ್ಲಿಗೆ ಬಿಟ್ಟು, ನಿಮ್ಮ ಕೆಲಸ ನೀವು ಮಾಡಿ. ಇಲ್ಲದಿದ್ದರೆ, ಸರ್ಕಾರದಿಂದ ಕಠಿಣ ಕ್ರಮ ಖಂಡಿತ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿನ ಕೋಮುದ್ವೇಷ ಬೆಳವಣಿಗೆಗಳನ್ನು ಖಂಡಿಸಿರುವ ಅವರು, ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಧರ್ಮ ಸಂಘರ್ಷ’ ಹಾಗೂ ನುಗ್ಗಿಕೇರಿ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಸೌಹಾರ್ದತೆಯಿಂದ ಬದುಕಬೇಕೆಂಬುದು ನಮ್ಮ ಆಸೆ. ಅದನ್ನು ಹಾಳು ಮಾಡುವ ಕೆಲಸ ಮಾಡಬೇಡಿ” ಎಂದು ಎಚ್ಚರಿಸಿದ್ದಾರೆ.
ಯಾರಾದರೂ ನಮ್ಮ ಸಹಬಾಳ್ವೆಗೆ ಅಡ್ಡಿ ಮಾಡುವಂತಹ ಪ್ರಯತ್ನ ಮಾಡಿದರೆ, ಮುಖ್ಯಮಂತ್ರಿಗಳು ಹೇಳಿದಂತೆ ಅಂಥವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಮುಂದೆಯಾದರೂ ಅಹಿತಕರ ಘಟನೆ ನಡೆಯದಂತೆ ಒಟ್ಟಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಡಬೇಕು” ಎಂದು ತಿಳಿಸಿದ್ದಾರೆ.
“ಈಗಾಗಲೇ ಮುಖ್ಯಮಂತ್ರಿ ಎಚ್ಚರಿಕೆ ಕೊಟ್ಟಿದ್ದಾರೆ. ಇಂತಹ ಘಟನೆಗಳನ್ನ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಾನೂ ಕೂಡ ಕಿವಿಮಾತು ಹೇಳುತ್ತಿದ್ದೇನೆ. ಇಲ್ಲಿಗೆ ಎಲ್ಲವನ್ನೂ ನಿಲ್ಲಿಸಿ, ನಿಮ್ಮ-ನಿಮ್ಮ ಕೆಲಸ ಮಾಡಿ. ಎಲ್ಲರೂ ಗೌರವ, ನೆಮ್ಮದಿಯಿಂದ ಬದುಕಬೇಕಾಗುತ್ತದೆ” ಎಂದು ಹೇಳಿದ್ದಾರೆ.