
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಕರಿಪ್ಪುರ್ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಅಲ್‌ಐನ್‌ನಿಂದ ಕರಿಪ್ಪುರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೋಝಿಕ್ಕೋಡ್ ಎಡಕ್ಕುಳಂ ನಿವಾಸಿ ಅಬ್ದುಲ್ ಶರೀಫ್ (25) ಎಂಬಾತನಿಂದ 1.037 ಕೆಜಿ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಚಿನ್ನವನ್ನು ಸೈಕಲ್‌ನ ಬಿಡಿಭಾಗಗಳ ಒಳಗೆ ಬಚ್ಚಿಟ್ಟು ಕಳ್ಳ ಸಾಗಾಟಕ್ಕೆ ಯತ್ನಿಸಿದ್ದ.
ಈತ ಸೈಕಲ್ ಬಿಡಿಭಾಗಗಳನ್ನು ಪ್ರತ್ಯೇಕವಾಗಿಸಿ ದೊಡ್ಡ ಪೆಟ್ಟಿಗೆಯಲ್ಲಿ ತಂದಿದ್ದು, ಅದನ್ನು ಪರಿಶೀಲಿಸಿದಾಗ ಕಸ್ಟಮ್ಸ್ ಅಧಿಕಾರಿಗಳಿಗೆ ಸಂಶಯ ಬಂತು. ಆದರೆ ಮೊದಲ ಹಂತದ ಪರಿಶೀಲನೆಯಲ್ಲಿ ಏನೂ ಪತ್ತೆಯಾಗಿಲ್ಲ.
ಬಳಿಕ ಆತನನ್ನು ಕೂಲಂಕಷವಾಗಿ ವಿಚಾರಿಸಿ ಪರಿಶೀಲಿಸಿದಾಗ ಸೈಕಲ್‌ನ ಆಸನವನ್ನು ಭದ್ರಪಡಿಸುವ ಲೋಹದ ಭಾಗದಲ್ಲಿ ಚಿನ್ನ ಪತ್ತೆ ಹಚ್ಚಲಾಗಿದೆ.
ಶೇ.81ರಷ್ಟು ಲೋಹವು ಚಿನ್ನವಾಗಿದ್ದು, ಈ ಲೋಹದಿಂದ ಚಿನ್ನವನ್ನು ಪ್ರತ್ಯೇಕಿಸಲು ಬರೋಬ್ಬರಿ ಎಂಟು ಗಂಟೆ ಬೇಕಾಗಿದ್ದು, ಲೋಹದಲ್ಲಿ ಚಿನ್ನ ಮಾತ್ರವಲ್ಲದೆ ಸತು, ನಿಕ್ಕಲ್ ಮತ್ತು ಬೆಳ್ಳಿಯನ್ನು ಹೊಂದಿರುವುದಾಗಿ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಚಿನ್ನವನ್ನು ವಿವಿಧ ರೀತಿಯಲ್ಲಿ ಕಳ್ಳ ಸಾಗಾಟ ಮಾಡಲಾಗುತ್ತಿದ್ದರೂ, ಇತರ ಲೋಹಗಳೊಂದಿಗೆ ಚಿನ್ನವನ್ನು ಕಳ್ಳಸಾಗಾಟ ಮಾಡುತ್ತಿರುವುದು ಇದೇ ಮೊದಲು.
ಚಿನ್ನ ಪ್ರತ್ಯೇಕಿಸುವುದು ಅತ್ಯಂತ ಕಷ್ಟದ ಕೆಲಸ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮಲಪ್ಪುರಂ ಪಟ್ಟರ್ ಕಡವ್ ನಿವಾಸಿ ಮುಹಮ್ಮದ್ ಬಶೀರ್ (48) ಎಂಬಾತ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳ ಸಾಗಾಟಕ್ಕೆ ಯತ್ನಿಸಿದ 52 ಲಕ್ಷ ಮೌಲ್ಯದ 1.012 ಕೆಜಿ ಚಿನ್ನದ ಮಿಶ್ರಣವನ್ನು ಪೊಲೀಸರು ವಶಪಡಿಸಿದ್ದಾರೆ.
ಆರೋಪಿಯು ಜಿದ್ದಾದಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಬಂದಿಳಿದ್ದು, ಕಸ್ಟಮ್ಸ್ ತಪಾಸಣೆ ಮುಗಿಸಿ ಹೊರಬಂದ ಬಳಿಕ ಸಂಬಂಧಿಕರ ಜತೆ ಕಾರಿನಲ್ಲಿ ಹೊರಗೆ ಹೋಗುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.
ಪೊಲೀಸರಿಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಚಿನ್ನ ಇರುವುದನ್ನು ಆರೋಪಿ ಒಪ್ಪಿಕೊಂಡಿರಲಿಲ್ಲ. ಸೂಟ್‌ಕೇಸ್ ಹಾಗೂ ಲಗೇಜುಗಳನ್ನು ಕೂಲಂಕಷವಾಗಿ ಪರಿಶೀಲಿಸಿದರೂ ಚಿನ್ನ ಪತ್ತೆಯಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಕೊಂಡೋಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಎಕ್ಸ್‌ರೇ ಪರೀಕ್ಷೆಯಲ್ಲಿ ನಾಲ್ಕು ಕ್ಯಾಪ್ಸೂಲ್‌ಗಳು ಪತ್ತೆಯಾಗಿದೆ.
ಚಿನ್ನ ಕಳ್ಳಸಾಗಾಟದಲ್ಲಿ ಶಾಮೀಲಾದ ಇತರರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕಸ್ಟಮ್ಸ್ ತಪಾಸಣೆ ಬಳಿಕ ಪೊಲೀಸರು ಚಿನ್ನ ವಶಪಡಿಸಿದ 60ನೇ ಪ್ರಕರಣ ಇದಾಗಿದೆ.