ರಾಜಕೀಯ

ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಕೈ ಸಿದ್ಧತೆ

ಎಐಸಿಸಿ ಅಧ್ಯಕ್ಷ ಪಟ್ಟ ಯಾರು ಅಲಂಕರಿಸುತ್ತಾರೆ ಎಂಬ ಕುತೂಹಲಗಳ ನಡುವೆ ಆ. ೨೧ ಮತ್ತು ಸೆ. ೨೦ ನಡುವೆ ಚುನಾವಣೆ ನಡೆಸಲು ಕೇಂದ್ರೀಯ ಚುನಾವಣಾ ಪ್ರಾಧಿಕಾರ ಪ್ರಕ್ರಿಯೆ ಆರಂಭಿಸಿದೆ.ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ವಿಚಾರದಲ್ಲಿ ರಾಹುಲ್‌ಗಾಂಧಿ ಇದುವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಹೀಗಾಗಿ, ಅಧ್ಯಕ್ಷಗಾದಿಗೆ ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ಗೆಲ್ಹೋಟ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೆಲಕಚ್ಚಿದ್ದು, ಕುಟುಂಬ ರಾಜಕಾರಣದ ವಿರುದ್ಧ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು.

ಈ ಹಿನ್ನೆಲೆಯಲ್ಲಿ ಹಿರಿಯ ನಾಯಕರಾಗಿರುವ ಸೋನಿಯಾ ಕುಟುಂಬಕ್ಕೆ ನಿಕಟರಾಗಿರುವ ಅಶೋಕ್‌ಗೆಲ್ಹೋಟ್ ಅವರ ಹೆಸರು ಪಕ್ಷದ ಪಡಸಾಲೆಯಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.ಅಧ್ಯಕ್ಷ ಗಾದಿಗೆ ಚುನಾವಣೆ ನಡೆಸುವ ಸಂಬಂಧ ಚುನಾವಣಾ ಪ್ರಾಧಿಕಾರವು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅನುಮೋದನೆಗೆ ಕಾಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಕಾಂಗ್ರೆಸ್ ಪ್ಲಾನ್ ಬಿ ಯೋಜನೆಯನ್ನು ಹೊಂದಿದ್ದು, ಆ ಪ್ರಕಾರ ಮತ್ತೆ ಎಐಸಿಸಿ ಅಧ್ಯಕ್ಷರನ್ನಾಗಿ ಸೋನಿಯಾಗಾಂಧಿಯವರನ್ನೇ ಮುಂದುವರೆಸುವುದು, ಪ್ರತಿಯೊಂದು ವಲಯಕ್ಕೂ ಪ್ರತ್ಯೇಕ ಕಾರ್ಯಾಧ್ಯಕ್ಷರನ್ನು ನೇಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಬಹಳ ಹಿಂದೆಯೇ ಈ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಗೆಲ್ಹೋಟ್ ಹೆಸರು ಕೇಳಿ ಬರುತ್ತಿದೆ. ಆದರೆ, ರಾಹುಲ್‌ಗಾಂಧಿ ಅವರು ಮತ್ತೆ ಅಧ್ಯಕ್ಷರಾಗಬೇಕೆಂಬ ಮಾತುಗಳು ಪಕ್ಷದ ವಲಯಗಳಲ್ಲಿ ಕೇಳಿ ಬರುತ್ತಿದೆ.

ಪಕ್ಷದ ಆಂತರಿಕ ಚುನಾವಣೆಗಳನ್ನು ನಡೆಸುವ ಅಧಿಕಾರ ಹೊಂದಿರುವ ಕೇಂದ್ರೀಯ ಚುನಾವಣಾ ಸಮಿತಿ (ಸಿಇಎ)ಗೆ ಈಗಾಗಲೇ ಮತದಾರರ ಪಟ್ಟಿಯನ್ನು ತಯಾರಿಸಿದೆ.ಆ. ೨೧ ರಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಲು ಕಾಂಗ್ರೆಸ್ ಮುಂದಾಗಿದ್ದು, ಇದುವರೆಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆದಿಲ್ಲ.

ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಮೀರಾಕುಮಾರ್ ಅವರಿಗೆ ಉನ್ನತ ಹುದ್ದೆಗಳನ್ನು ನೀಡುವ ನಿರೀಕ್ಷೆ ಇದೆ. ಖರ್ಗೆ ಅವರು ರಾಹುಲ್‌ಗಾಂಧಿ ಅವರಿಗೆ ನಿಕಟರಾಗಿದ್ದು, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖಪಾತ್ರ ವಹಿಸುವ ಸಾಧ್ಯತೆ ಇದ್ದು, ರಾಷ್ಟ್ರಮಟ್ಟದಲ್ಲಿ ಉನ್ನತ ಹುದ್ದೆ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಈ ಎಲ್ಲ ವಿದ್ಯಮಾನಗಳ ನಡುವೆ ರಾಹುಲ್‌ಗಾಂಧಿ ಸರಣಿ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ, ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ದೇಶದ ಎಲ್ಲ ಜಿಲ್ಲೆಗಳಿಗೂ ರಾಹುಲ್‌ಗಾಂಧಿ ಭಾರತ್ ಜೋಡೊ ಹೆಸರಿನಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ.ಚುನಾವಣೆ ದೃಷ್ಟಿಯಿಂದ ಮತ್ತೆ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳುವಂತೆ ರಾಹುಲ್‌ಗಾಂಧಿ ಆಪ್ತರು ಒತ್ತಡ ಹೇರುತ್ತಿದ್ದಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button