
ಮೈಸೂರು: ಬಂಗಾಳಕೊಲ್ಲಿಯ ಮೇಲ್ಮೈನಲ್ಲಿ ಬೀಸುತ್ತಿರುವ ಸುಳಿಗಾಳಿ ಪರಿಣಾಮ, ಮೈಸೂರಿನಲ್ಲಿ ತುಂತುರು ಮಳೆಯ ಜೊತೆಗೆ ಚುಮು ಚುಮು ಚಳಿಗಾಳಿಯ ವಾತಾವರಣ ಮನೆ ಮಾಡಿದೆ. ಅಕ್ಷರಶಃ ಮೈಸೂರು ಊಟಿಯಾಗಿ ಪರಿವರ್ತನೆಯಾಗಿದೆ.
ಶುಕ್ರವಾರ ಮೈಸೂರು ಊಟಿಯನ್ನು ನೆನಪಿಸುವ ವಾತಾವರಣದಿಂದ ಕಂಗೊಳಿಸುತ್ತಿತ್ತು. ಚಾಮುಂಡಿಬೆಟ್ಟದಲ್ಲಿ ಝರಿಗಳ ಜೊತೆಗೆ ಮಂಜು ಮುಚ್ಚಿದ ವಾತಾವರಣ ಹಿತಕರ ಅನುಭವ ನೀಡುತ್ತಿತ್ತು.
ಮೈಸೂರಿನ ಓವಲ್ ಗ್ರೌಂಡ್, ಚಾಮುಂಡಿಬೆಟ್ಟ, ಕುಕ್ಕರಹಳ್ಳಿಕೆರೆ, ಲಿಂಗಾಬುಧಿಕೆರೆ ಸೇರಿದಂತೆ ವಿವಿಧೆಡೆ ಸಾರ್ವಜನಿಕರು ಬೆಳಗ್ಗೆ, ಸಂಜೆ ವಾಕಿಂಗ್ ಹೋಗುತ್ತಾರೆ.
ಇಲ್ಲೆಲ್ಲಾ ಮಂಜಿನ ಹೊದಿಕೆ ಆಕರ್ಷಣೆ ಉಂಟು ಮಾಡಿದೆ. ಸೈಕ್ಲಿಂಕ್ ಮಾಡುವವರಂತೂ ಹಿಮದಿಂದ ಆವೃತ್ತವಾಗಿರುವ ರಸ್ತೆ, ಅರಮನೆ, ಬೆಟ್ಟದ ಸೊಬಗನ್ನು ಹೆಚ್ಚು ಆಸ್ವಾದಿಸುತ್ತಿದ್ದಾರೆ.
ಚಾಮುಂಡಿ ಬೆಟ್ಟದ ತಪ್ಪಲಿನ ಹಸಿರು ಮರಗಳು ಮಂಜಿನಿಂದ ಆವೃತ್ತಗೊಂಡಿದ್ದು, ಮಲೆನಾಡಿನ ವಾತಾವರಣವನ್ನು ನೆನಪಿಸುತ್ತಿದೆ.
ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ಮಾಗಿ ಚಳಿ ಎಂಟ್ರಿ ಕೊಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿ ಅಧಿಕವಾಗಿದೆ.
ಬೆಂಗಳೂರಿನಲ್ಲಂತೂ ಈ ಬಾರಿ ದಾಖಲೆಯ ತಾಪಮಾನ ದಾಖಲಾಗಿದೆ. ಅದೇ ಕರಾವಳಿ ಭಾಗದಲ್ಲಿ ಮಾತ್ರ ಎಂದಿನಂತೆ ಸೆಕೆ ಆವರಿಸಿದೆ.
ಈ ವರ್ಷ ಮುಂಗಾರಿನಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದ್ದರಿಂದ ಬಯಲು ಸೀಮೆ ಸೇರಿದಂತೆ ಬಹುತೇಕ ಕಡೆಗಳಲ್ಲಿಕೆರೆ-ಕಟ್ಟೆಗಳು ತುಂಬಿವೆ. ಬಯಲುಸೀಧಿಮೆಯ ನದಿಗಳು ಜೀವನದಿಗಳಾಗಿ ಮಾರ್ಪಟ್ಟಿವೆ. ಕೆಲವೆಡೆ ದಶಕಗಳ ನಂತರ ಕೆರೆ-ಕಟ್ಟೆಗಳು ಕೋಡಿ ಬಿದ್ದಿವೆ.
ಜತೆಗೆ, ಎಲ್ಲೆಡೆ ಹಸಿರಿನ ರಾಶಿ ಮೈದಳೆದಿದೆ. ಪರಿಣಾಮ, ಗ್ರಾಮೀಣ ಪ್ರದೇಶದಲ್ಲಿಸಂಜೆಯಾಗುತ್ತಿದ್ದಂತೆಯೇ ಚಳಿಯ ವಾತಾವರಣ ಸೃಷ್ಟಿಯಾಗುತ್ತಿದೆ. ತಣ್ಣನೆಯ ಗಾಳಿ ಜನರನ್ನು ಬೇಗ ಮನೆ ಸೇರುವಂತೆ ಮಾಡುತ್ತಿದೆ.
ಮಳೆಯಿಂದ ಕಂಗಾಲಾಗಿದ್ದ ರಾಜಧಾನಿ ಸದ್ಯ ಚಳಿಯಿಂದ ನಡುಗುತ್ತಿದೆ. ಮಂಗಳವಾರ ಬೆಳಗ್ಗೆ ನಗರದಲ್ಲಿಕನಿಷ್ಠ 15.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 2008ರ ಅಕ್ಟೋಬರ್ ನಂತರ ದಾಖಲಾದ ಅತ್ಯಂತ ಕಡಿಮೆ ತಾಪಮಾನವಾಗಿದೆ.
”ರಾಜಧಾನಿಯಲ್ಲಿವಿಶೇಷವಾಗಿ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ಚಳಿ ವಾತಾವರಣ 3-4 ದಿನಗಳವರೆಗೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿಅಕ್ಟೋಬರ್‌ನಲ್ಲಿಸಾಮಾನ್ಯ ಕನಿಷ್ಠ ತಾಪಮಾನವು 19 ರಿಂದ 20 ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ” ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು, ಬಾಂಗ್ಲಾದ ಕರಾವಳಿಯಲ್ಲಿ ಸಿತ್ರಂಗ್ ಚಂಡಮಾರುತದ ಹಿನ್ನೆಲೆಯಲ್ಲಿ ನಗರದ ತಾಪಮಾನ ಮಾಮೂಲಿಗಿಂತ ನಾಲ್ಕು ಡಿಗ್ರಿ ಕಡಿಮೆಯಾಗಿದೆ. ಪರ್ಯಾಯ ದ್ವೀಪ ಪ್ರದೇಶದ ವಾತಾವರಣದಲ್ಲಿನ ತೇವಾಂಶ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡು ಈಶಾನ್ಯ ದಿಕ್ಕಿನ ಕಡೆಗೆ ಸೆಳೆಯುತ್ತವೆ.
ಇದು ಮೋಡ ರಹಿತ ಆಕಾಶವನ್ನು ಸೃಷ್ಟಿಸುತ್ತವೆ. ಮೋಡ ಇಲ್ಲದೇ ಇರುವುದರಿಂದ, ಭೂಮಿಯಿಂದ ಹೊರಸೂಸುವ ಶಾಖ ಎಲ್ಲಾಕಡೆ ಹರಡುತ್ತದೆ. ಇದು ಚಳಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.