ಉರುಳಿಬಿದ್ದ ಭಾರೀ ಗಾತ್ರದ ಮರ; ತಪ್ಪಿದ ಅನಾಹುತ

ಬೆಂಗಳೂರು, ಮೇ 31-ಜನನಿಬಿಡ ಪ್ರದೇಶದಲ್ಲಿರುವ ಭಾರೀ ಮರ ಉರುಳಿಬಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಿನ್ನೆ ರಾತ್ರಿ ಬಿದ್ದ ಮಳೆಗೆ ಜೆಪಿ ನಗರದ ಎರಡನೆ ಫೇಸ್‍ನಲ್ಲಿರುವ ಕೆಎಸ್‍ಆರ್‍ಟಿಸಿ ಬಡಾವಣೆಯಲ್ಲಿರುವ ಭಾರೀ ಮರದ ಬೇರುಗಳು ಸಡಿಲಗೊಂಡ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಮರ ಧರೆಗುರುಳಿ ಬಿದ್ದಿದೆ.
ಭಾರೀ ಮರ ಉರುಳಿಬಿದ್ದ ಪ್ರದೇಶದಲ್ಲಿ ಹಲವಾರು ಮನೆಗಳಿವೆ. ಉರುಳಿಬಿದ್ದ ಮರದ ಸಮೀಪವೇ ಗರ್ಭಿಣಿಯೊಬ್ಬರ ಕುಟುಂಬವೂ ವಾಸಿಸುತ್ತಿತ್ತು.
ಅದೃಷ್ಟವಶಾತ್ ಮರ ಉರುಳಿ ಬೀಳುವ ಸಂದರ್ಭದಲ್ಲಿ ಮನೆಯಿಂದ ಯಾರು ಹೊರ ಬಾರದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ಉರುಳಿ ಬಿದ್ದಿರುವ ಮರ ಕಳೆದ ಕೆಲವು ದಿನಗಳಿಂದ ವಾಲಿಕೊಂಡಿತ್ತು. ವಾಲಿದ ಮರವನ್ನು ಕಟ್ ಮಾಡುವಂತೆ ಸ್ಥಳೀಯರು ಬಿಬಿಎಂಪಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಹತ್ತು-ಹಲವು ಬಾರಿ ಮನವಿ ಮಾಡಿದರೂ ಬಿಬಿಎಂಪಿ ಅಧಿಕಾರಿಗಳು ಕೇರ್ ಮಾಡಲೇ ಇಲ್ಲ. ಅವರ ಬೇಜವಬ್ದಾರಿತನದಿಂದಲೇ ಇಂದು ಮರ ಉರುಳಿಬಿದ್ದಿದೆ.
ಒಂದು ವೇಳೆ ಯಾವುದೇ ಅನಾಹುತ ಸಂಭವಿಸಿದ್ದರೆ ಅದರ ಹೊಣೆಯನ್ನು ಪಾಲಿಕೆ ಹೊರುತ್ತಿತ್ತೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಒಂದು ದಿನ ಸುರಿದ ಭಾರೀ ಮಳೆಗೆ ನಗರದಲ್ಲಿ ಏನೆಲ್ಲಾ ಅನಾಹುತವಾಯಿತು ಎನ್ನುವುದು ಕಣ್ಣೆದುರಲ್ಲೇ ಇದೆ.
ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ ಇಂತಹ ಸಂದರ್ಭದಲ್ಲೂ ಬಿಬಿಎಂಪಿಯವರು ತಮ್ಮ ಉದಾಸೀನ ಧೋರಣೆ ಮುಂದುವರೆಸಿರುವುದಕ್ಕೆ ಸಾರ್ವಜನಿಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಬಿಬಿಎಂಪಿ ಮುಖ್ಯ ಆಯುಕ್ತರು ಭವಿಷ್ಯದಲ್ಲಿ ಆಗುವ ಮಳೆ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಮ್ಮ ಅೀಧಿನ ಅಧಿಕಾರಿಳಿಗೆ ಸೂಚಿಸುವ ಮೂಲಕ ಜನರ ಪ್ರಾಣ,ಆಸ್ತಿ ರಕ್ಷಣೆಗೆ ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರೀಕರ ಆಗ್ರಹವಾಗಿದೆ.