
ಪಾಲುದಾರಿಕೆ ಕೊಡುವುದಾಗಿ ಕೋಟಿಗಟ್ಟಲೆ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ ಪ್ರಕರಣದಲ್ಲಿ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಸೇರಿದಂತೆ 6 ಮಂದಿಯ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಡೆತ್ ನೋಟ್ ಆಧರಿಸಿ ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆತ್ಮಹತ್ಯೆಗೆ ಶರಣಾದ ಪ್ರದೀಪ್ ಕೊನೆ ಬಾರಿಗೆ ಕರೆ ಮಾಡಿದ್ದು ಯಾರಿಗೆ..? ಪ್ರದೀಪ್ ಜತೆಗೆ ಯಾಱರಿಗೆ ಸಂಬಂಧ ಇದೆ. ಮೃತ ಪ್ರದೀಪ್ ಯಾರೊಂದಿಗೆ ವ್ಯವಹಾರ ಮಾಡಿದ್ದರು.
ಆತನ ವಾಟ್ಸಪ್ನಲ್ಲಿ ಡೀಟೈಲ್ಸ್ ಏನಿದೆ..? ಆತ್ಮಹತ್ಯೆ ಮಾಡಿಕೊಳ್ಳುವಾಗ ಬಳಸಿದ ಗನ್ ಯಾರದ್ದು..? ಅದರ ಲೈಸನ್ಸ್ ನಂಬರ್ ಏನು..? ಗನ್ ಮೇಲಿರೋ ಬೆರಳಚ್ಚು ಯಾರದ್ದು..? ಹೀಗೆ ಹತ್ತಾರು ವಿಚಾರಗಳ ಕುರಿತಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಮೃತ ವ್ಯಕ್ತಿಯು ಮೈಸೂರು ನಿವಾಸಿಯಾಗಿದ್ದು, ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದ. ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.