ರಾಷ್ಟ್ರಿಯ

ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಹತ್ಯೆ ಪ್ರಕರಣಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ

ಧಾರವಾಡ: ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್‌ನ ಹತ್ಯೆ ಪ್ರಕರಣಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದೆ. ಈ ಹತ್ಯೆಗೆ ಸರ್ಕಾರವೇ ಜವಾಬ್ದಾರಿಯಾಗಿದೆ ಎಂದ ಮುತಾಲಿಕ್, ಇಡೀ ದೇಶದಲ್ಲಿ ಭಯೋತ್ಪಾದಕರನ್ನು ಕಾಂಗ್ರೆಸ್ ಬೆಳೆಸಿದೆ ಎಂದು ಆರೋಪಿಸಿದರು. ಅಷ್ಟೇ ಅಲ್ಲ, ಒಂದು ತಿಂಗಳೊಗೆ ಹಂತಕರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಉದಯಪುರ ಘಟನೆಯಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಕಿಡಿ ಕಾರಿದರು. ಪ್ರಜಾಪ್ರಭುತ್ವದ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ. ಆದರೆ, ಕೆಲವು ಕಿಡಿಗೇಡಿಗಳು ಸಂವಿಧಾನಕ್ಕೆ ಬೆಲೆ ಕೊಡದೆ, ನ್ಯಾಯಾಲಯವನ್ನು ಧಿಕ್ಕರಿಸಿ, ತಮ್ಮದೇ ಆದ ರೀತಿಯಲ್ಲಿ ತಾಲಿಬಾನ್ ಮಾದರಿಯ ಕೃತ್ಯ ನಡೆಸುತ್ತಿದ್ದಾರೆ, ನಾವು ಇದನ್ನು ಖಂಡಿಸುತ್ತೇವೆ ಎಂದು ಹರಿಹಾಯ್ದರು.

ಬುದ್ಧಿ ಜೀವಿಗಳೇ ಒಬ್ಬರಾದ್ರೂ ಮಾತಾಡಿ: ಈ ಕೊಲೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸರ್ಕಾರ ನಾಟಕ ಮಾಡೋದನ್ನ ನಿಲ್ಲಿಸಬೇಕು. ಇಸ್ಲಾಂ ಮಾನಸಿಕತೆಯನ್ನ ನಿಲ್ಲಿಸಬೇಕು. ಅವರನ್ನ ಸಮುದಾಯದಿಂದ ಬಹಿಷ್ಕಾರ ಹಾಕಬೇಕು. ಧಾರವಾಡದಲ್ಲಿ ಕಲ್ಲಂಗಡಿ ಒಡೆದಿದ್ದಕ್ಕೆ ಹಾಹಾಕಾರ ಮಾಡಿದರು. ಇನ್ನು ಕುಮಾರಸ್ವಾಮಿ ಅವರು 10 ಸಾವಿರ ರೂ. ಪರಿಹಾರ ಕೊಟ್ಟು ದೊಡ್ಡ ರಾದ್ಧಾಂತ ಮಾಡಿದರು. ಈಗ ಏನು ಮಾಡ್ತಿದ್ದೀರಿ? ಬುದ್ಧಿ ಜೀವಿಗಳೇ ಒಬ್ಬರಾದ್ರೂ ಮಾತನಾಡಿ ಎಂದು ಮುತಾಲಿಕ್ ಆಗ್ರಹಿಸಿದರು.

ಪ್ರಕರಣದ ಹಿನ್ನೆಲೆ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡ ಆರೋಪದ ಮೇಲೆ ಇಬ್ಬರು ದುಷ್ಕರ್ಮಿಗಳು ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಒಬ್ಬರ ಕತ್ತು ಸೀಳಿ ಕೊಲೆ ಮಾಡಿದ್ದರು. ಬಳಿಕ ವಿಡಿಯೋ ಮಾಡಿ ಪ್ರಧಾನಿ ಮೋದಿಯವರಿಗೆ ಬೆದರಿಕೆ ಹಾಕಿದ್ದರು. ಕತ್ತು ಸೀಳಿ ಹತ್ಯೆ ಮಾಡುವ ದೃಶ್ಯ ಹಾಗೂ ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕುವ ದೃಶ್ಯಗಳನ್ನು ದುಷ್ಕರ್ಮಿಗಳು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button