ಉಗ್ರರಿಂದ ಮ್ಯಾಗ್ನೆಟಿಕ್ ದಾಳಿ ಬೆದರಿಕೆ ವ್ಯಾಪಕ ಭದ್ರತೆ

ಇದೇ ತಿಂಗಳ ೩೦ ರಿಂದ ಪವಿತ್ರ ಅಮರನಾಥ್ ಯಾತ್ರೆಯು ಆರಂಭವಾಗಲಿದ್ದು, ಆದರೆ, ಯಾತ್ರಾರ್ಥಿಗಳನ್ನು ಹೊತ್ತೊಯ್ಯುವ ವಾಹನಗಳ ಮೇಲೆ ಉಗ್ರರು ಮ್ಯಾಗ್ನೆಟಿಕ್ ಬಾಂಬ್ ದಾಳಿ ಮಾಡಬಹುದು ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಬೆನ್ನಲ್ಲೇ ಭದ್ರತೆ ಹೆಚ್ಚಳ ಮಾಡಲಾಗಿದೆ.
ಈ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಪವಿತ್ರ ಅಮರನಾಥನ ದರ್ಶನ ಮಾಡುವ ಅಂದಾಜಿದೆ. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಭದ್ರತಾ ಪಡೆಗಳು ಹೊಡೆದುರುಳಿಸಿತು.
ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದೊಡ್ಡ ಉಗ್ರ ದಾಳಿಯ ಸಂಚಿನ ಭಾಗವಾಗಿ ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಈ ಡ್ರೋನ್ ಮೂಲಕ ಸಾಗಿಸಲಾಗುತ್ತಿತ್ತು.ಇನ್ನೊಂದೆಡೆ ಚಾರ್ ಧಾಮ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳ ಬಸ್ ಮೇಲೆ ದಾಳಿ ಮಾಡಲು ಉಗ್ರರು ಮ್ಯಾಗ್ನೆಟಿಕ್ ಬಾಂಬ್ ಗಳನ್ನು ಬಳಸಬಹುದು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಹಿನ್ನೆಲೆ ಪರಿಶೀಲನೆ ಮತ್ತು ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.ಅಮರನಾಥ ಯಾತ್ರೆಯ ಭದ್ರತಾ ಕಾರ್ಯತಂತ್ರದ ಕುರಿತು ಭದ್ರತಾ ಪಡೆಗಳು ಹೊಸದಾಗಿ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿವೆ.
ಸುರಕ್ಷತಾ ದೃಷ್ಟಿಯಿಂದ ಅಮರನಾಥ ಯಾತ್ರಿಕರ ವಾಹನದ ಸಂಚಾರದ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ.ಅಮರನಾಥ ಯಾತ್ರಿಕರ ವಾಹನಗಳು ಮತ್ತು ಭದ್ರತಾ ಪಡೆಗಳ ವಾಹನಗಳನ್ನು ಕಟ್ಟುನಿಟ್ಟಾಗಿ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತದೆ.
ವಾಹನದಲ್ಲಿ ಯಾರು ಇಲ್ಲದೇ ಖಾಲಿ ಬಿಡದಿರುವಂತೆ ಭದ್ರತಾ ಪಡೆಗಳು ಮತ್ತು ಯಾತ್ರೆ ನಿರ್ವಹಿಸುವ ಏಜೆಂಟರಿಗೆ ಸೂಚಿಸಲಾಗಿದೆ ಎಂದು ಸಿಆರ್ ಪಿಎಫ್ ಮೂಲಗಳು ತಿಳಿಸಿವೆ.
ದಕ್ಷಿಣ ಕಾಶ್ಮೀರದ ಎತ್ತರದ ಪ್ರದೇಶದಲ್ಲಿರುವ ಅಮರನಾಥ ಗುಹಾಂತರ ದೇಗುಲಕ್ಕೆ ಈ ವರ್ಷ ಸುಮಾರು ಮೂರು ಲಕ್ಷ ಯಾತ್ರಿಕರು ಭೇಟಿ ನೀಡುವ ಅಂದಾಜಿದೆ. ಆಗಸ್ಟ್ ೧೧ ರಂದು ಅಮರನಾಥ ಯಾತ್ರೆ ಕೊನೆಗೊಳ್ಳಲಿದೆ.