ಉಕ್ಕಿ ಹರಿಯುತ್ತಿರುವ ನದಿ ಪ್ರವಾಹದಲ್ಲಿ ಮೃತ ದೇಹ ಹೊತ್ತೊಯ್ದ ಗ್ರಾಮಸ್ಥರು

ಮಂಡ್ಯ: ಉಕ್ಕಿ ಹರಿಯುತ್ತಿರುವ ನದಿ ಪ್ರವಾಹದಲ್ಲಿ ಮಹಿಳೆಯ ಮೃತ ದೇಹ ಹೊತ್ತೊಯ್ದು ಅಂತ್ಯ ಸಂಸ್ಕಾರ ನೆರವೇರಿಸಿರುವ ಮನಕುಲಕುವ ಘಟನೆ ಶ್ರೀರಂಗಪಟ್ಟಣದ ಮಹದೇಪುರ ಗ್ರಾಮದಲ್ಲಿ ನಡೆದಿದೆ.
ನಿರಂತರ ಮಳೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶ್ರೀರಂಗಪಟ್ಟಣದ ಮಹದೇಪುರ ಗ್ರಾಮದ ಸ್ಮಶಾನದ ರಸ್ತೆ ಕಾವೇರಿ ಪ್ರವಾಹದಿಂದ ಬಂದ್ ಆಗಿದೆ.
ಈ ಮಧ್ಯೆ ನೆನ್ನೆ ಸಂಜೆ ಗ್ರಾಮದ ಸುಮಲೋಚನ ಎಂಬ ಮಹಿಳೆ ಮೃತಪಟ್ಟಿದ್ದರು. ಏಕಾಏಕಿ ಕಾವೇರಿ ನದಿಯಲ್ಲಿ ಪ್ರವಾಹ ಬಂದು ಸ್ಮಶಾನದ ದಾರಿ ಮುಳುಗಡೆ ಆಗಿರುವ ಕಾರಣ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಬೇರೆ ದಾರಿಯಿಲ್ಲದೆ ಪ್ರವಾಹದ ನೀರಿನಲ್ಲಿ ಹೊತ್ತೊಯ್ಯಲಾಗಿದೆ.
ಈ ಪ್ರದೇಶದಲ್ಲಿ ಬಹುದಿನಗಳಿಂದ ಸ್ಮಶಾನಕ್ಕೆ ಸೇತುವೆ ನಿರ್ಮಾಣಕ್ಕಾಗಿ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಆದರೂ, ಈ ಬಗ್ಗೆ ಅಧಿಕಾರಿಗಳು ಕಿವಿಗೊಡತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರವಾಹ ಕಾರಣದಿಂದಾಗಿ ಅಂತ್ಯ ಸಂಸ್ಕಾರದಲ್ಲಿಯೂ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗದೇ ಕುಟುಂಬದ ಕೆಲವೇ ಕೆಲವು ಸದಸ್ಯರು ಪ್ರವಾಹ ದಾಟಿ ಅಂತ್ಯಕ್ರಿಯೆ ಮುಗಿಸಿ ವಾಪಸ್ಸಾಗಿದ್ದಾರೆ.