ರಾಜ್ಯ

ಈ ವರ್ಷವೂ ಕರಾವಳಿ ಉತ್ಸವ ಡೌಟು: ಉತ್ಸವ ಆಯೋಜನೆಗೆ ನಿರಾಸಕ್ತಿ

ಮಂಗಳೂರು: ಜಿಲ್ಲಾಡಳಿತ ಕಳೆದ ಮೂರು ದಶಕದಿಂದ ನಿರಂತರ ಆಯೋಜಿಸಿಕೊಂಡು ಬರುತ್ತಿದ್ದ ಕರಾವಳಿ ಉತ್ಸವ ಈ ವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವುದು ಡೌಟು. ಯಾಕೆಂದರೆ ಇಂದಿನವರೆಗೆ ಯಾವುದೇ ಸಿದ್ಧತೆ ಸಭೆ, ಸಮಿತಿಗಳ ಸಭೆ ನಡೆಯಲಿಲ್ಲ.

ವಸ್ತು ಪ್ರದರ್ಶನದ ಟೆಂಡರ್‌ ಅಂತಿಮಗೊಳ್ಳಲಿಲ್ಲ. ಉತ್ಸವ ನಡೆಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೂ ಆಸಕ್ತಿ ಇದ್ದಂತಿಲ್ಲ.ಕೋವಿಡ್‌ 19ರ ಕಾರಣದಿಂದಾಗಿ ನಿಂತಿದ್ದ ಕರಾವಳಿ ಉತ್ಸವವನ್ನು ಈ ವರ್ಷ ಸಂಭ್ರಮದಿಂದ ಆಯೋಜಿಸುವುದಾಗಿ ಜನಪ್ರತಿನಿಧಿಗಳು ಹೇಳಿಕೆ ನೀಡಿದ್ದರು.

ಪ್ರತಿವರ್ಷ ಡಿಸೆಂಬರ್‌ನಲ್ಲಿಆಯೋಜಿಸಿಕೊಂಡು ಬರಲಾಗುತ್ತಿತ್ತು. ಕರಾವಳಿ ಉತ್ಸವ 45 ದಿನಗಳ ಸುದೀರ್ಘ ಕಾರ್ಯಕ್ರಮವಾಗಿತ್ತು. ಕರಾವಳಿ ಉತ್ಸವ ಮೈದಾನದ ಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸ್ಥಳೀಯ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು.

ವಾರಾಂತ್ಯದಲ್ಲಿ ರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯಕ್ರಮವನ್ನು ಕದ್ರಿ ಪಾರ್ಕ್ನಲ್ಲಿ, ಸಮಾರೋಪ ಸಮಾರಂಭವನ್ನು ಬೀಚ್‌ನಲ್ಲಿ ಮೂರು ದಿನಗಳ ಉತ್ಸವವಾಗಿ, ಅಂತಾರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿತ್ತು.

ಆದರೆ ಇದಕ್ಕೆ ಕೆಲವೊಂದು ಬದಲಾವಣೆ ಮಾಡಿ, ಕರಾವಳಿ ಉತ್ಸವ ಮೈದಾನದಲ್ಲಿ 45 ದಿನಗಳ ವಸ್ತು ಪ್ರದರ್ಶನ ಹಾಗೂ ಹತ್ತು ದಿನಗಳ ಕಾಲ ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದ ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಗರದ ಕದ್ರಿ ಪಾರ್ಕ್ ಮತ್ತು ಉತ್ಸವ ಮೈದಾನದ ವೇದಿಕೆಯಲ್ಲಿಆಯೋಜಿಸಲಾಗುತ್ತಿತ್ತು.

ಕರಾವಳಿ ಉತ್ಸವದ ಹೆಸರು ಬಳಸಲು ರಾಯಲ್ಟಿಯಾಗಿ ವಸ್ತು ಪ್ರದರ್ಶನದ ಬಿಡ್‌ದಾರರು ಕನಿಷ್ಠ 30 ಲಕ್ಷ ರೂ.ವನ್ನು ಜಿಲ್ಲಾಡಳಿತಕ್ಕೆ ಹಾಗೂ ಪ್ರತಿದಿನಕ್ಕೆ 25 ಸಾವಿರ ರೂ. ಬಾಡಿಗೆಯಾಗಿ 45 ದಿನಕ್ಕೆ 11.25 ಲಕ್ಷ ರೂ.ವನ್ನು ಸ್ಟೇಡಿಯಂ ಸಮಿತಿಗೆ ಪಾವತಿಸಬೇಕು.

ಈ ಮೊತ್ತಕ್ಕೆ ಶೇ.18 ಜಿಎಸ್‌ಟಿ ಹೀಗೆ ಒಟ್ಟು 48.67 ಲಕ್ಷ ರೂ. ಮೊತ್ತವನ್ನು ಬಿಡ್‌ದಾರರು ಕನಿಷ್ಠ ಪಾವತಿಸಬೇಕು. ಇನ್ನು ನಿರ್ವಹಣೆ ವೆಚ್ಚ ಪ್ರತ್ಯೇಕವಾಗಿರುತ್ತದೆ.ಕರಾವಳಿ ಉತ್ಸವ ಯಶಸ್ವಿಯಾಗಬೇಕು, ವಸ್ತು ಪ್ರದರ್ಶನಕ್ಕೆ ಹೆಚ್ಚಿನ ಪ್ರದರ್ಶಕರು ಬರಬೇಕು ಎಂಬ ಕಾರಣದಿಂದಾಗಿ ಪ್ರತಿವರ್ಷ ಡಿಸೆಂಬರ್‌ ಮೂರನೇ ಶನಿವಾರದಿಂದ ಉತ್ಸವಕ್ಕೆ ಚಾಲನೆ ನೀಡಲು ರಮಾನಾಥ ರೈ ಅವರು ಜಿಲ್ಲಾಉಸ್ತುವಾರಿ ಸಚಿವರಾಗಿದ್ದ ವೇಳೆ ತೀರ್ಮಾನಿಸಲಾಗಿತ್ತು.

ಮೈಸೂರಿನ ದಸರಾ ವಸ್ತು ಪ್ರದರ್ಶನ ಡಿಸೆಂಬರ್‌ನಲ್ಲಿ ಮುಗಿಯುವ ಕಾರಣ ಅಲ್ಲಿಂದ ಪ್ರದರ್ಶನಕಾರರು ಇಲ್ಲಿಗೆ ಬರುವಂತೆ ಮಾಡುವುದು ಇದರ ಹಿಂದಿರುವ ಉದ್ದೇಶವಾಗಿತ್ತು. ಯಾಕೆಂದರೆ ವಸ್ತು ಪ್ರದರ್ಶನದಲ್ಲಿಎಲ್ಲಮಳಿಗೆ ಭರ್ತಿಯಾದರೆ ಜನರೂ ಹೆಚ್ಚು ಬರುತ್ತಾರೆ ಎಂಬ ಪರಿಕಲ್ಪನೆ ಇಲ್ಲಿತ್ತು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ವಸ್ತು ಪ್ರದರ್ಶನದ ಟೆಂಡರ್‌ ಕರೆದು, ಅಕ್ಟೋಬರ್‌ನಲ್ಲಿಅಂತಿಮಗೊಳಿಸಲಾಗುತ್ತಿತ್ತು. ಬಳಿಕ ನಾವು ಮೈಸೂರಿಗೆ ತೆರಳಿ ಅಲ್ಲಿನ ಪ್ರದರ್ಶಕರನ್ನು ಆಹ್ವಾನಿಸುವುದರೊಂದಿಗೆ, ಮೂರು ತಿಂಗಳು ಮಾರುಕಟ್ಟೆ ಮಾಡಿ, ಹೆಚ್ಚು ಮಳಿಗೆ ಬರುವಂತೆ ಮಾಡುತ್ತಿದ್ದೆವು.

ಆದರೆ ಉತ್ಸವದ ದಿನಾಂಕ ನಿಗದಿಪಡಿಸುವಲ್ಲಿ ಮತ್ತು ಟೆಂಡರ್‌ ಪ್ರಕ್ರಿಯೆ ವಿಳಂಬದಿಂದಾಗಿ, ಪ್ರದರ್ಶನಕ್ಕೆ ಮಳಿಗೆ ಭರ್ತಿ ಮಾಡಲು ಕಷ್ಟವಾಗಲಾರಂಭಿಸಿತು. ಇದರಿಂದಾಗಿ ನಾವು ಕಡಿಮೆ ಮೊತ್ತದಲ್ಲಿ ಟೆಂಡರ್‌ ಸಲ್ಲಿಸುವುದು ಅನಿವಾರ್ಯವಾಗಿದೆ.

ಕ್ರಮೇಣ ವಸ್ತು ಪ್ರದರ್ಶನಕ್ಕೆ ಟೆಂಡರ್‌ ಹಾಕುವವರೇ ಕಡಿಮೆಯಾಯಿತು ಎನ್ನುತ್ತಾರೆ ಈ ಹಿಂದೆ ವಸ್ತುಪ್ರದರ್ಶನ ಟೆಂಡರ್‌ ಪಡೆದಿರುವ ರಾಜೇಶ್‌ ಕುಮಾರ್‌.ಮೂರು ಬಾರಿ ಟೆಂಡರ್‌ ಕರೆದಾಗಲೂ ಕನಿಷ್ಠ ದರಕ್ಕಿಂತ ಕಡಿಮೆ ಮೊತ್ತದ ಬಿಡ್‌ ಬಂದಿದ್ದರೆ ಸಾಮಾನ್ಯವಾಗಿ ಹರಾಜು ಪ್ರಕ್ರಿಯೆಯನ್ನು ಜಿಲ್ಲಾಡಳಿತ ಮಾಡುತ್ತಿತ್ತು.

ಆದರೆ ಈ ವರ್ಷ ಈ ಪ್ರಕ್ರಿಯೆಯನ್ನು ಇನ್ನೂ ಜಿಲ್ಲಾಡಳಿತ ಆರಂಭಿಸಲಿಲ್ಲ.ಕಾಟಾಚಾರದ ಉತ್ಸವ ಆಗದಿರಲಿಕೊನೆ ಕ್ಷಣದಲ್ಲಿ ದಿನಾಂಕ ನಿಗದಿಪಡಿಸಿ ಉತ್ಸವ ಮಾಡಿದರೆ ಕಳೆದ ಬಾರಿಯಂತೆ ವಸ್ತು ಪ್ರದರ್ಶನದಲ್ಲಿ ಮಳಿಗೆಗಳು ಭರ್ತಿಯಾಗುವುದಿಲ್ಲ.

ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಸಿಗದೆ ಅಲ್ಲೂ ಗುಣಮಟ್ಟದ ಹೊಂದಾಣಿಕೆ ಮಾಡಬೇಕಾಗುತ್ತದೆ. ಜನವರಿಯಲ್ಲಿಉತ್ಸವ ಮಾಡಿದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿರುತ್ತದೆ.ವಸ್ತು ಪ್ರದರ್ಶನಕ್ಕೆ ಕರಾವಳಿ ಉತ್ಸವದ ಅರ್ಧ ಮಾತ್ರ ನೀಡಲಾಗುತ್ತಿದೆ.

ಉಳಿದ ಅರ್ಧವನ್ನು ವಾಕಿಂಗ್‌ಗಾಗಿ ಮೀಸಲಿಡಲಾಗಿದೆ. ಇದರಿಂದಾಗಿ ಹೆಚ್ಚು ಮಳಿಗೆಗಳನ್ನು ಹಾಕಲು ಸಾಧ್ಯವಿಲ್ಲ. ಮಳಿಗೆ ಅಧಿಕ ಬಾಡಿಗೆ ನಿಗದಿಪಡಿಸಿದರೆ ಅವರು ಭಾಗವಹಿಸಲು ಆಸಕ್ತಿ ವಹಿಸುವುದಿಲ್ಲ. ಇದರಿಂದಾಗಿ ನಮಗೆ ಹಾಕಿದ ಹಣ ವಾಪಸ್‌ ಬರುವುದಿಲ್ಲಎಂಬುದು ಬಿಡ್‌ದಾರರ ವಾದ.ಮೂಲಸೌಲಭ್ಯ ಕೊರತೆ:ಕರಾವಳಿ ಉತ್ಸವ ಮೈದಾನದಲ್ಲಿ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲ.

ಶೌಚಾಲಯ, ಕುಡಿಯುವ ನೀರು ಹೀಗೆ ಯಾವುದೂ ಇಲ್ಲ. ಕರಾವಳಿ ಉತ್ಸವ ಮೈದಾನವು ಎಂಸಿಸಿ ಅಧೀನದಲ್ಲಿದ್ದರೂ, ಬಾಡಿಗೆಯನ್ನು ಸ್ಟೇಡಿಯಂ ಸಮಿತಿಯು ಪಡೆಯುತ್ತದೆ. ಸ್ಟೇಡಿಯಂ ಸಮಿತಿಯು ಮೈದಾನದ ಅಭಿವೃದ್ಧಿಗೆ ಖರ್ಚು ಮಾಡುವುದಿಲ್ಲ.

ಇತ್ತ ಎಂಸಿಸಿ ಕೂಡ ಗಮನ ಹರಿಸುವುದಿಲ್ಲ. ಈ ಹಿಂದೆ ಸುಲಭ್‌ ಶೌಚಾಲಯ ನಿರ್ಮಾಣಕ್ಕಾಗಿ ಯೋಜನೆ ಹಾಕಿಕೊಂಡಿತ್ತು. ಅದರ ಮೊತ್ತವನ್ನು ಎನ್‌ಎಂಪಿಟಿ ಭರಿಸಲು ಮುಂದೆ ಬಂದಿತ್ತು. ಆದರೆ ಇಂದಿನ ವರೆಗೆ ಯೋಜನೆ ಅನುಷ್ಠಾನಕ್ಕೆ ಯಾರೂ ಆಸಕ್ತಿ ತೋರಿಸಿಲ್ಲಎನ್ನುತ್ತಾರೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button