
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ಬಿ ರಿಪೋರ್ಟ್‍ನ ಸಂಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡುವಂತೆ 42ನೇ ವಿಶೇಷ ನ್ಯಾಯಾಲಯ ಆದೇಶಿಸಿದೆ.
ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 31ರೊಳಗೆ ಎಲ್ಲಾ ಸಾಕ್ಷ್ಯಗಳನ್ನು ಕೋರ್ಟ್‍ಗೆ ಸಲ್ಲಿಸಬೇಕು ಎಂದು ಹೇಳಿದೆ.
ಈ ಹಿಂದೆ ಪಾಟೀಲ್ ಕುಟುಂಬಸ್ಥರು ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಆ ಸಂದರ್ಭದಲ್ಲಿ ದಾಖಲೆ ನೀಡಿದ್ದ ಉಡುಪಿ ಪೊಲೀಸರು ಸಂಪೂರ್ಣ ದಾಖಲಾತಿ ಸಲ್ಲಿಕೆಗೆ ಹಿಂದೇಟು ಹಾಕಿದ್ದರು.
ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯದ ಹೊಸ ಆದೇಶ ನೀಡಿದೆ.ಸಂತೋಷ್ ಪಾಟೀಲ್ ಅವರು ಮಾಜಿ ಸಚಿವ ಈಶ್ವರಪ್ಪ ಅವರ ಪಿಎಗೆ ಹಣ ನೀಡಿರುವುದು ವಾಟ್ಸಪ್ ಚಾಟ್‍ನಲ್ಲಿ ಬಹಿರಂಗವಾಗಿದೆ.
ಸಂತೋಷ್ ಪಾಟೀಲ್ ಮಾಜಿ ಸಚಿವ ಈಶ್ವರಪ್ಪ ಪಿಎ ಜೊತೆ ನಡೆಸಿರುವ ವಾಟ್ಸಪ್ ಚಾಟ್ ಪ್ರತಿ ಕೂಡ ಲಭ್ಯವಾಗಿದೆ. ಈ ಮೂಲಕ ಈಶ್ವರಪ್ಪಗೆ ಸಂತೋಷ್ ಆತ್ಮಹತ್ಯೆ ಪ್ರಕರಣ ಇನ್ನೂ ಸಂಕಷ್ಟ ತಂದಿಟ್ಟಿದೆ.
ಈಶ್ವರಪ್ಪ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್‌ನೋಟ್ ಬರೆದಿಟ್ಟು ಉಡುಪಿ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.