ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಹಿನ್ನೆಲೆ: ಪ್ರತಿಭಟನೆಗೆ ಮುಂದಾದ ಪ್ರಮೋದ್ ಮುತಾಲಿಕ್ ವಶಕ್ಕೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಹುಬ್ಬಳ್ಳಿಯ ಈದ್ಗಾ ಮೈದಾನದ ಬಳಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮುಂದಾದರು.
ಈ ವೇಳೆ ಚೆನ್ನಮ್ಮ ವೃತ್ತದ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮೋದ್ ಮುತಾಲಿಕ್ ಅವರನ್ನ ಪೊಲೀಸರು ವಶಕ್ಕೆ ಪಡೆದರು.ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ಪಾಲಿಕೆ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಕೊಟ್ಟಿದ್ದು ತಪ್ಪು.
ರಾಜ್ಯದಲ್ಲಿ ಬಿಜೆಪಿಯವರೇ ಟಿಪ್ಪು ಜಯಂತಿ ರದ್ದು ಮಾಡಿದ್ದರು. ಈಗ ಅವರೇ ಟಿಪ್ಪು ಜಯಂತಿಗೆ ಆಚರಣೆಗೆ ಅವಕಾಶ ಕೊಟ್ಟಿದ್ದಾರೆ. ಬಿಜೆಪಿಯವರು ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಬೇರೆ ಮಹಾಪುರಷರ ಜೊತೆ ಟಿಪ್ಪು ಹೋಲಿಕೆ ಸರಿಯಲ್ಲ.
ಟಿಪ್ಪು ಒಬ್ಬ ಮತಾಂಧ ದೇಶದ್ರೋಹಿ. ಟಿಪ್ಪು ಜಯಂತಿ ವಿರೋಧಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸುತ್ತೇನೆ. ಕನಕ ಜಯಂತಿ ಆಚರಣೆ ಮಾಡಲು ಮನವಿ ಮಾಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.