ಇನ್ಮುಂದೆ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಒಂದೇ ರೀತಿಯ ಚಾರ್ಜರ್ ಪೋರ್ಟ್ ಕಡ್ಡಾಯ

ನವದೆಹಲಿ: ಹೊಸ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಂಡಾಗಲೆಲ್ಲಾ ಅದಕ್ಕೆ ಹೊಂದಿಕೊಳ್ಳುವ ಚಾರ್ಜರ್ ಖರೀದಿಸಬೇಕಾದ ಅನಿವಾರ್ಯತೆಯನ್ನು ತಡೆಯುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ ಇರಿಸಲಾಗುತ್ತಿದೆ. ಇನ್ಮುಂದೆ ಮೊಬೈಲ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಒಂದೇ ರೀತಿಯ ಚಾರ್ಜರ್ ಪೋರ್ಟ್ ಕಡ್ಡಾಯ ಮಾಡಿ, ಕೇಂದ್ರ ಸರ್ಕಾರ ಶೀಘ್ರವೇ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಹೊಸ ನಿಯಮದಿಂದ ಪ್ರತಿ ಬಾರಿ ಹೊಸ ರೀತಿಯ ಚಾರ್ಜರ್ ಕೊಳ್ಳುವ ಕಿರಿಕಿರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಂತ ಗ್ರಾಹಕರಿಗೆ ತಪ್ಪಲಿದೆ. ಇದಲ್ಲದೇ ಪ್ರತಿ ವರ್ಷ ಭಾರೀ ಪ್ರಮಾಣದಲ್ಲಿ ಸೃಷ್ಠಿಯಾಗುತ್ತಿರುವಂತ ಪರಿಸರಕ್ಕೆ ಮಾರಕವಾಗುವಂತ ಇ-ತ್ಯಾಜ್ಯ ಪ್ರಮಾಣವೂ ನಿಯಂತ್ರಣಕ್ಕೆ ಬರಲಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಒಂದೇ ಮಾದರಿಯ ಚಾರ್ಜರ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ.
ಈ ಸಂಬಂಧ ಆಗಸ್ಟ್ 17ರಂದು ಗ್ರಾಹಕ ಸಚಿವಾಲಯವು ಪ್ರಮುಖ ಉದ್ಯಮಗಳು, ಸಂಸ್ಥೆಗಳ ಸಭೆ ಕರೆದಿದ್ದು, ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಇಯರ್ ಬಡ್ ಮುಂತಾದ ಎಲ್ಲಾ ಸಾಧನಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಮತ್ತು ಫೀಚರ್ ಪೋನ್ ಗಳಿಗಾಗಿ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಗಳನ್ನು ಜಾರಿಗೆ ತರೋ ಸಂಬಂಧ ಚರ್ಚೆ ನಡೆಸಲಿದೆ. ಒಂದು ವೇಳೆ ಈ ಸಭೆಯ ಚರ್ಚೆ ಫಲಪ್ರದವಾದ್ರೇ.. ದೇಶದಲ್ಲಿ ಇನ್ಮುಂದೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಕ್ಕೂ ಒಂದೇ ಮಾದರಿಯ ಚಾರ್ಜರ್ ಇರಲಿದೆ.