ಇದೇ ಮೊದಲು: ರಾಜ್ಯದ ವಿವಿ, ಪದವಿ ಕಾಲೇಜಲ್ಲಿ ಇಂದಿನಿಂದ ‘ಆನ್ ಲೈನ್’ ಮೂಲಕ ಪ್ರವೇಶಾತಿ ಆರಂಭ

ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳಿಗೆ ಇಂದಿನಿಂದ ಏಕರೂಪದ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಪ್ರವೇಶಾತಿ ನಡೆಯಲಿದೆ. ಆಗಸ್ಟ್ 17ರಿಂದ ತರಗತಿಗಳು ಆರಂಭವಾಗಲಿವೆ.
ದ್ವಿತೀಯ ಪಿಯು ಫಲಿತಾಂಶ ಪ್ರಕಟದ ಬಳಿಕ, ಅನೇಕ ವಿವಿಗಳು, ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದವು. ಆದ್ರೇ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ.
ಈ ಹಿನ್ನಲೆಯಲ್ಲಿ ಪ್ರಕಟಿತ ಶೈಕ್ಷಣಿಕ ವೇಳಾಪಟ್ಟಿಯಂತೆ ಜುಲೈ.11ರ ಇಂದಿನಿಂದ ಪದವಿ ಕಾಲೇಜುಗಳಿಗೆ ಆನ್ ಲೈನ್ ಮೂಲಕ ದಾಖಲಾತಿ ಆರಂಭಗೊಳ್ಳಲಿದೆ. ಸರ್ಕಾರ ಸಿದ್ಧಪಡಿಸಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ತಂತ್ರಾಂಶದ ಮೂಲಕವೇ ಪ್ರವೇಶಾತಿ ನಡೆಸೋದು ಕಡ್ಡಾಯವಾಗಿದೆ.
ಇನ್ನೂ ಪದವಿಯನ್ನು ಯಾವುದೇ ವರ್ಷದಲ್ಲಿ ಮೊಟಕುಗೊಳಿಸಿದರೂ ಅದಕ್ಕೂ ಪ್ರಮಾಣಪತ್ರಗಳು ಸಿಗಲಿವೆ. ಬಳಿಕ ಯಾವಾಗ ಬೇಕಾದ್ರೂ ಮೊಟಕುಗೊಳಿಸಿದ ಸೆಮಿಸ್ಟರ್ ನಿಂದ ಓದನ್ನು ಪುನರಾರಂಭಿಸಬಹುದಾಗಿದೆ. ಪ್ರಕಟಿತ ಶೈಕ್ಷಣಿಕ ವೇಳಾಪಟ್ಟಿಯಂತೆ ಆಗಸ್ಟ್ 15ಕ್ಕೆ ಮೊದಲು ಸೆಮಿಸ್ಟರ್ ನ ಎಲ್ಲಾ ಪ್ರವೇಶ ಮುಕ್ತಾಯವಾಗಿ, ಆಗಸ್ಟ್ 17ರಿಂದ ತರಗತಿಗಳು ಪ್ರಾರಂಭವಾಗಲಿವೆ.