ಇಂದು ವಿಶ್ವ ಹಿಂದೂ ಪರಿಷತ್ ನಿಂದ ಶ್ರಿರಂಗ ಪಟ್ಟಣ ಚಲೋ ಕೂಡ ಹಮ್ಮಿಕೊಳ್ಳಲಾಗಿದೆ
ಮಂಡ್ಯ: ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿನ ಜಾಮೀಮಿಯಾ ಮಸೀದಿ ವಿವಾದ ತಾರಕಕ್ಕೇರಿದೆ. ಜೂ.4ರ ಇಂದು ವಿಶ್ವ ಹಿಂದೂ ಪರಿಷತ್ ನಿಂದ ಶ್ರಿರಂಗ ಪಟ್ಟಣ ಚಲೋ ಕೂಡ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ನಾಳೆಯಿಂದ ಜೂನ್ 6ರ ಬೆಳಿಗ್ಗೆಯವರೆಗೆ ಶ್ರೀರಂಗ ಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಗಳಿಸಲಾಗಿದೆ.
ಈ ಕುರಿತಂತು ಆದೇಶ ಹೊರಡಿಸಿರುವಂತ ಶ್ರೀರಂಗ ಪಟ್ಟಣ ತಹಶೀಲ್ದಾರ್ ಅವರು, ಶ್ರೀರಂಗ ಪಟ್ಟಣ ಟೌನ್ ಪೇಟೆ ಬೀದಿಯಲ್ಲಿ ಮೂಡಲ ಆಂಜನೇಯ ದೇವಸ್ಥಾನವಿದ್ದು, ಹಿಂದೆ ದೇವಸ್ಥಾನವು ಹಾಲಿ ಇರುವ ಶ್ರೀರಂಗ ಪಟ್ಟಣ ಟೌನ್ ಜಾಮಿಯಾ ಮಸೀದಿ ಕಟ್ಟದಲ್ಲಿ ಇತ್ತೆಂದು, ಅದನ್ನು ಟಿಪ್ಪು ಸುಲ್ತಾನ್ ಆಳ್ವಿಕೆ ಕಾಲದಲ್ಲಿ ಕೆಡವಿ, ಮೂರ್ತಿಯನ್ನು ಪೇಟೆ ಬೀದಿಯಲ್ಲಿರುವ ಹಾಲಿ ಮೂಡಲಬಾಗಿಲ ಆಂಜನೇಯ ಪ್ರತಿಷ್ಠಾಪನೆ ಮಾಡಿರುತ್ತಾರೆಂದು ಹಿಂದೂಪರ ಸಂಘಟನೆಗಳ ವದಂತಿ ಇರುತ್ತದೆ.
ಈ ಹಿನ್ನಲೆಯಲ್ಲಿ ದಿನಾಂಕ 04-06-2022ರ ಇಂದು ಮಧ್ಯಾಹ್ನ 12ಕ್ಕೆ ಶ್ರೀರಂಗಪಟ್ಟಣ ಕುವೆಂಪು ವೃತ್ತದಿಂದ ಹಾಲಿ ಕೇಂದ್ರ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಶ್ರೀರಂಗಪಟ್ಟಣ ಟೌನ್ ಪುರಸಭೆ ವೃತ್ತದ ಬಳಿ ಇರುವ ಜಾಮೀಯಾ ಮಸೀದಿವರೆಗೆ ಶ್ರೀರಂಗ ಪಟ್ಟಣ ಚಲೋ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ದಿನಾಂಕ 03-06-2022ರ ಸಂಜೆ 6 ಗಂಟೆಯಿಂದ ದಿನಾಂಕ 05-06-2022ರ ಬೆಳಿಗ್ಗೆ 6 ಗಂಟೆಯವರೆಗೆ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಮೆರವಣಿಗೆ, ರಥಯಾತ್ರೆ, ಪ್ರತಿಭಟನೆ ನಡೆಸದಂತೆ ಕಲಂ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.
ಇನ್ನೂ ಮುಂಜಾಗ್ರತಾ ಕ್ರಮವಾಗಿ ಇಂದು ಶ್ರೀರಂಗಪಟ್ಟಣದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ.