ರಾಜಕೀಯರಾಜ್ಯರಾಷ್ಟ್ರಿಯಸಂಸ್ಕೃತಿ

ಇಂಡಿಯಾವನ್ನು ‘ಹಿಂದಿಯಾ’ ಮಾಡುವ ಪ್ರಯತ್ನ ನಿಲ್ಲಿಸಿ: ಅಮಿತ್ ಶಾಗೆ ಸ್ಟಾಲಿನ್ ತರಾಟೆ

ಚೆನ್ನೈ: ಹಿಂದಿ ಭಾಷೆಯು ಸ್ಥಳೀಯ ಭಾಷೆಗಳ ಸ್ನೇಹಿತನೇ ವಿನಾ, ಸ್ಪರ್ಧಿಯಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯು ‘ಇಂಡಿಯಾವನ್ನು ಹಿಂದಿಯಾ’ ಮಾಡುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಸಿಎಂ ಸ್ಟಾಲಿನ್ ಆಗ್ರಹಿಸಿದ್ದಾರೆ.

“8ನೇ ಪರಿಚ್ಛೇದದಲ್ಲಿನ ಎಲ್ಲ 22 ಭಾಷೆಗಳನ್ನೂ ಸರ್ಕಾರದ ಅಧಿಕೃತ ಭಾಷೆಗಳೆಂದು ಘೋಷಣೆ ಮಾಡಿ.

ಹಿಂದಿಯು ರಾಷ್ಟ್ರ ಭಾಷೆಯಲ್ಲ, ಅದು ಏಕೈಕ ಅಧಿಕೃತ ಭಾಷೆಯೂ ಅಲ್ಲ. ಹಿಂದಿ ದಿವಸದ ಬದಲು ನಾವು ಭಾರತೀಯ ಭಾಷಾ ದಿನವನ್ನು ಆಚರಿಸಬೇಕು” ಸ್ಟಾಲಿನ್ ಹೇಳಿದ್ದಾರೆ.

“ಹಿಂದಿ ಅಭಿವೃದ್ಧಿ Vs ಇತರೆ ಭಾಷೆಗಳಿಗೆ ಬಳಸುವ ಸಂಪನ್ಮೂಲಗಳ ನಡುವೆ ಇರುವ ಭಾರಿ ಅಂತರವನ್ನು ಕೇಂದ್ರ ಸರ್ಕಾರ ತಗ್ಗಿಸಬೇಕು.

ಕೇಂದ್ರವು ಎನ್‌ಇಪಿ ಮೂಲಕ ಹಿಂದಿ ಮತ್ತು ಸಂಸ್ಕೃತಗಳನ್ನು ಮಾತ್ರವೇ ಹೇರಿಕೆ ಮಾಡುತ್ತಿದೆ” ಎಂದು ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಹರಿಹಾಯ್ದಿದ್ದಾರೆ.

“ಇದು ಇಂಡಿಯಾ. ಹಿಂದಿಯಾ ಅಲ್ಲ. ತಮಿಳು ಸೇರಿದಂತೆ ಭಾರತೀಯ ಭಾಷೆಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳೆಂದು ಘೋಷಣೆ ಮಾಡಬೇಕು. ಹಿಂದಿ ದಿವಸದ ಸಂದರ್ಭದಲ್ಲಿ ಹಿಂದಿ ಕುರಿತಂತೆ ಅಮಿತ್ ಶಾ ಆಡಿದ ಮಾತುಗಳು ಒಪ್ಪುವಂತಹದ್ದಲ್ಲ” ಎಂದಿದ್ದಾರೆ.

ವಿವಿಧತೆಯಲ್ಲಿ ಏಕತೆಗೆ ವಿರುದ್ಧ”ಭಾರತದ ಸಂಸ್ಕೃತಿ ಮತ್ತು ಇತಿಹಾಸ ಅರ್ಥಮಾಡಿಕೊಳ್ಳಲು ಜನರು ಹಿಂದಿ ಕಲಿಯಬೇಕು ಎನ್ನುವುದು, ವಿಭಿನ್ನ ಭಾಷೆಗಳನ್ನು ಮಾತನಾಡುವ ಜನರನ್ನು ಒಳಗೊಂಡ ಭಾರತದ ವಿವಿಧತೆಯಲ್ಲಿ ಏಕತೆಯ ತತ್ವಕ್ಕೆ ವಿರುದ್ಧವಾಗಿದೆ. ಭಾರತದ ಸಂಸ್ಕೃತಿ ಮತ್ತು ಇತಿಹಾಸ ಹಿಂದಿಯಲ್ಲಿ ಅಡಗಿಲ್ಲ.

ತಮಿಳಿನ ನೇತೃತ್ವದಲ್ಲಿ ದ್ರಾವಿಡ ಭಾಷೆಗಳ ಕುಟುಂಬ ಇಂದಿನ ಭಾರತ ಮತ್ತು ಅದರಾಚೆಗೂ ಹರಡಿದೆ ಎನ್ನುವುದನ್ನು ಇತಿಹಾಸಕಾರರು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ” ಎಂದು ಹೇಳಿದ್ದಾರೆ.

“ದೇಶದ ಸಂಸ್ಕೃತಿ ಮತ್ತು ಇತಿಹಾಸವನ್ನು ನಿಜಕ್ಕೂ ಅರ್ಥಮಾಡಿಕೊಳ್ಳಲು ದೇಶದ ದಕ್ಷಿಣ ಭಾಗದಿಂದ ಭಾರತದ ಇತಿಹಾಸವನ್ನು ‘ಪುನರ್ ರಚಿಸಲು’ ಇತಿಹಾಸಕಾರರು ಹಾಗೂ ಸಂಶೋಧಕರು ಬಯಸಿದ್ದಾರೆ.

ದಿಲ್ಲಿಯಲ್ಲಿ ಆಡಳಿತ ನಡೆಸುವವರು, ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ ಹೊಂದಿರುವ ತಮಿಳು ಹಾಗೂ ಇತರೆ ಭಾಷೆಗಳನ್ನು ಕಡೆಗಣಿಸುತ್ತ, ಹಿಂದಿಯನ್ನು ‘ರಾಷ್ಟ್ರ ಭಾಷೆ’ ಎಂದು ಬಿಂಬಿಸುತ್ತಿರುವುದು ಅವರ ದಬ್ಬಾಳಿಕೆ ನಿಲುವೇ ವಿನಾ ಬೇರೇನೂ ಅಲ್ಲ” ಎಂದು ಕಿಡಿಕಾರಿದ್ದಾರೆ.

“ನಮ್ಮ ಶ್ರೀಮಂತ ತಮಿಳು ಭಾಷೆಯನ್ನು ರಕ್ಷಿಸಲು ಜೀವಗಳನ್ನು ತ್ಯಾಗ ಮಾಡಿದ ಇತಿಹಾಸವನ್ನು ತಮಿಳುನಾಡು ಹೊಂದಿದೆ” ಎಂದು 1965ರ ಹಿಂದಿ ವಿರೋಧಿ ಪ್ರತಿಭಟನೆಯನ್ನು ಉಲ್ಲೇಖಿಸಿದ್ದಾರೆ.

ಹಿಂದಿಯು ಭಾರತದ ರಾಷ್ಟ್ರ ಭಾಷೆ ಅಲ್ಲ. ಅದು ಏಕೈಕ ಅಧಿಕೃತ ಭಾಷೆಯೂ ಅಲ್ಲ. ಹಿಂದಿಯು ಭಾರತದ ಆಡಳಿತ ಭಾಷೆ. ಇಂಗ್ಲಿಷ್ ಕೂಡ ಆಡಳಿತ ಭಾಷೆಯಾಗಿದೆ ಎಂದಿದ್ದಾರೆ.

ನೆಹರು ಹಾಕಿದ ಬೇಲಿಹಿಂದಿಯ ಪ್ರಾಬಲ್ಯದಿಂದ ಉತ್ತರ ಭಾರತದಲ್ಲಿನ ಮೈಥಿಲಿ, ಭೋಜಪುರಿಯಂತಹ ಅನೇಕ ಸಣ್ಣ ಭಾಷೆಗಳು ಬಹುತೇಕ ಅಳಿವಿನಂಚಿನಲ್ಲಿವೆ.

ಇಂಗ್ಲಿಷ್ ಅನ್ನು ಅಧಿಕೃತ ಭಾಷೆಯನ್ನಾಗಿ ಅಳವಡಿಸಿಕೊಳ್ಳುವ ಮೂಲಕ ಹಿಂದಿ ಪ್ರಾಬಲ್ಯದಿಂದ ತಮಿಳಿನಂತಹ ಭಾಷೆಗಳನ್ನು ಉಳಿಸಲು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ‘ಬೇಲಿ’ ಹಾಕಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ.

ಆ ಬೇಲಿ ಈಗಲೂ ಬಲವಾಗಿದೆ. ಅದಕ್ಕಾಗಿಯೇ ಪ್ರಬಲ ಭಾಷೆಗಳಿಂದ ತಮಿಳನ್ನು ಮೂಲೆಗುಂಪು ಮಾಡಲು ಸಾಧ್ಯವಾಗಿಲ್ಲ.

ಅಮಿತ್ ಶಾ ಅವರಿಗೆ ಸ್ಥಳೀಯ ಭಾಷೆಗಳ ಬಗ್ಗೆ ಕಾಳಜಿ ಇದ್ದರೆ, ಹಿಂದಿ ಮತ್ತು ಸಂಸ್ಕೃತಕ್ಕೆ ನೀಡುವಷ್ಟೇ ಅನುದಾನವನ್ನು ತಮಿಳಿನಂತಹ ಭಾಷೆಗಳಿಗೂ ನೀಡಲಿ.

ಆದರೆ, ಎನ್‌ಇಪಿ ಮೂಲಕ ಹಿಂದಿ ಹೇರಿಕೆ ಮಾಡಲು ಕೇಂದ್ರ ಸರ್ಕಾರ ಶತಾಯಗತಾಯ ಪ್ರಯತ್ನದಲ್ಲಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?ಸೂರತ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಮಿತ್ ಶಾ, “ನಾನು ಒಂದು ಸಂಗತಿಯನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.

ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಸ್ಪರ್ಧಿಗಳು ಎಂಬ ಸುಳ್ಳು ಮಾಹಿತಿಯನ್ನು ಕೆಲವು ಜನರು ಹಬ್ಬಿಸುತ್ತಿದ್ದಾರೆ. ದೇಶದ ಯಾವುದೇ ಇತರೆ ಭಾಷೆಗೂ ಹಿಂದಿ ಸ್ಪರ್ಧಿಯಾಗಲು ಸಾಧ್ಯವಿಲ್ಲ.

ದೇಶದ ಎಲ್ಲ ಭಾಷೆಗಳಿಗೂ ಹಿಂದಿ ಸ್ನೇಹಿತ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದರು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button