ಆ್ಯಂಬುಲೆನ್ಸ್ ಚಾಲಕರಿಂದಲೂ ಲಂಚ ಪಡೆದ 40% ಸರ್ಕಾರ

ಆರೋಗ್ಯ ಕವಚ 108 ಆ್ಯಂಬುಲೇನ್ಸ್‍ನ ಚಾಲಕರಿಗೆ ಸಮರ್ಪಕವಾಗಿ ವೇತನ ನೀಡದ ಕುರಿತು ಹಲವು ದಿನಗಳಿಂದಲೂ ದೂರು ಕೇಳಿಬಂದರೂ ಆರೋಗ್ಯ ಸಚಿವರು ಕಣ್ಮುಚ್ಚಿ ಕುಳಿತಿರುವುದರ ಹಿಂದೆ ಕಮಿಷನ್ ರಹಸ್ಯ ಅಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕೋವಿಡ್ ಸಮಯದಲ್ಲಿ ಹೆಣದ ಮೇಲೂ ಹಣ ಮಾಡಿದ ಸಚಿವ ಡಾ.ಸುಧಾಕರ್, ಈಗ ಬಡ ಚಾಲಕರನ್ನು ಕಿತ್ತು ತಿನ್ನುತ್ತಿದ್ದಾರೆ ಎಂದು ಆರೋಪಿಸಿದೆ.ಲಂಚ ಮಂಚದ ಸರ್ಕಾರದಲ್ಲಿ ಕಮಿಷನ್ ದೇವೋ ಭವ ಎಂಬ ಘೋಷಣೆ ಜಾರಿಯಲ್ಲಿದೆ.
108 ಆ್ಯಂಬುಲೆನ್ಸ್ ಚಾಲಕರ ವೇತನದಲ್ಲಿ ಕಮಿಷನ್ ಲೂಟಿ ನಡೆಸುತ್ತಿರುವ ಅಕಾರಿಗಳಿಂದ ಸಚಿವ ಸುಧಾಕರ್ ಅವರಿಗೆ ಒಂದು ಕೋಟಿ ನೀಡಬೇಕು ಎಂಬ ಸತ್ಯ ಹೊರಬಂದಿದೆ.
ಫೋನ್ ಪೇ ಮೂಲಕ ಲಂಚ ಪಡೆಯುವ ಮೂಲಕ ಸರ್ಕಾರ ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಘೋಷಣೆಗೆ ನೈಜ ಅರ್ಥ ಕಲ್ಪಿಸಿದೆ ಎಂದು ಟೀಕಿಸಿದೆ.ಆರೋಗ್ಯ ಕವಚ ಯೋಜನಾ ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ ಎಂಬುವರು ಕೆಲ ದಾಖಲೆಗಳು ಹಾಗೂ ಆಡಿಯೋವನ್ನು ಬಿಡುಗಡೆ ಮಾಡಿದ್ದರು.
ಅದರ ಪ್ರಕಾರ ಈ ಹಿಂದೆ ಸಂಘದ ಅಧ್ಯಕ್ಷರ ಕಾಲದಲ್ಲಿ ಸಿಬ್ಬಂದಿಗಳಿಂದ ಫೋನ್ ಪೇಯಂತಹ ಮೊಬೈಲ್ ಆಪ್‍ಗಳ ಮೂಲಕ ಚಾಲಕರಿಂದ ಸುಮಾರು ಒಂದು ಕಾಲು ಕೋಟಿ ಹಣ ಸಂಗ್ರಹಿಸಲಾಗಿದೆ.
ನಂತರ ಅದರಲ್ಲಿ ಒಂದು ಕೋಟಿ ರೂಪಾಯಿಯನ್ನು ಸಂಘದ ಜಿಲ್ಲಾಧ್ಯಕರ ಮೂಲಕ ಸಚಿವರಿಗೆ ತಲುಪಿಸಲಾಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪೂರಕವಾಗಿ ಆಡಿಯೋವೊಂದನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಕಾಂಗ್ರೆಸ್ ತನ್ನ ಟ್ವೀಟ್‍ನಲ್ಲಿ ಉಲ್ಲೇಖಿಸಿದೆ.