ಬೆಂಗಳೂರುರಾಜಕೀಯರಾಜ್ಯ

ಆಹಾರ ಸಚಿವ ಉಮೇಶ್‌ ಕತ್ತಿ ಹೃದಯಾಘತದಿಂದ ನಿಧನ

ಬೆಂಗಳೂರು: ಸಚಿವ ಉಮೇಶ್ ಕತ್ತಿ (61) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಅವರನ್ನು ನಗರದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಆಗಿತ್ತು. ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಅವರು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು, ಅರಣ್ಯ ಇಲಾಖೆ ಹಾಗೂ ವಿಜಯಪುರ ಉಸ್ತುವಾರಿ ಸಚಿವರಾಗಿ ಉಮೇಶ್ ಕತ್ತಿ ಹೊಣೆ ನಿರ್ವಹಿಸುತ್ತಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಒಲವು ಹೊಂದಿದ್ದರು ಉಮೇಶ್ ಕತ್ತಿ. ಅವರು ಹುಕ್ಕೇರಿ ಶಾಸಕರಾಗಿದ್ದರು. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯನ್ನು ಪ್ರತಿನಿಧಿಸುತ್ತಿದ್ದ ಅವರು, ಒಟ್ಟು ಎಂಟು ಬಾರಿ ಶಾಸಕರಾಗಿ ಗೆದ್ದು ಬಂದಿದ್ದರು. ನಾಲ್ಕು ಬಾರಿ ಸಚಿವರಾಗಿದ್ದರು.
ಪ್ರತ್ಯೇಕ ರಾಜ್ಯ, ಸಿಎಂ ಕನಸು:
ಆಂಧ್ರಪ್ರದೇಶ, ತೆಲಂಗಾಣದಂತೆ ಕರ್ನಾಟಕದಲ್ಲೂಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಉಮೇಶ್‌ ಕತ್ತಿ ದನಿ ಎತ್ತಿದ್ದರು. ಜತೆಗೆ, ಅಖಂಡ ರಾಜ್ಯದ ಸಿಎಂ ಆಗುವ ಆಕಾಂಕ್ಷೆಯನ್ನೂ ಬಹಿರಂಗವಾಗಿ ವ್ಯಕ್ತಪಡಿಸಿದ್ದರು.
ಮಾಹಿತಿ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್‌ ಆಸ್ಪತ್ರೆಗೆ ಬಂದರು. ಉಮೇಶ್ ಕತ್ತಿ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ಬೆಳಗಾವಿ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹೋದ್ಯೋಗಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಅರಣ್ಯ ಸಚಿವ, ನನ್ನ ಆಪ್ತ ಸಹೋದ್ಯೋಗಿ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ,ಕ್ರಿಯಾಶೀಲ ಮುಖಂಡ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟಿಸಿದ್ದಾರೆ.

ಆಸ್ಪತ್ರೆಯ ಸಮೀಪ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್, ‘ಆಸ್ಪತ್ರೆಗೆ ಬರುವುದಕ್ಕೆ ಮುನ್ನವೇ ಪಲ್ಸ್‌ ನಿಂತಿತ್ತು. ಶೌಚಾಲಯಕ್ಕೆ ತೆರಳಿದ್ದ ಅವರಿಗೆ ಹೃದಯಾಘಾತ ಆಗಿದೆ. ಅವರನ್ನು ಉಳಿಸಲು ಸುಮಾರು ಅರ್ಧ ತಾಸು ವೈದ್ಯರು ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಅವರಿಗೆ ಹೃದಯಾಘಾತ ಆಗಿತ್ತು. ಅವರ ಮನೆಯವರು ಹಾವೇರಿಯಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಳಗಾವಿಗೆ ಪಾರ್ಥಿವ ಶರೀರವನ್ನು ಏರ್‌ಲಿಫ್ಟ್‌ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಅವರ ಪತ್ನಿ ಮತ್ತು ಸೋದರ ಬಂದ ನಂತರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅವರ ಮಗಳು ಮತ್ತು ಅಳಿಯ ಇಲ್ಲೇ ಇದ್ದಾರೆ. ಅವರು ಬಹಳ ಲವಲವಿಕೆಯಿಂದ ಇದ್ದ ವ್ಯಕ್ತಿ ಆಗಿದ್ದರು’ ಎಂದು ಹೇಳಿದರು.

‘ರಾಜಕೀಯ ಅಪಾರ ಅನುಭವ ಹೊಂದಿದ್ದರು. ತುಂಬಾ ತಮಾಷೆ ಮಾಡುತ್ತಿದ್ದರು, ಅವರೊಂದಿಗೆ ಆತ್ಮೀಯ ಸಂಬಂಧ ಇತ್ತು. ಅವರು ಮನೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿರುವುದಾಗಿ ತಿಳಿದು ಬಂದಿತ್ತು. ಇಪ್ಪತ್ತೈದನೆಯ ವಯಸ್ಸಿಗೆ ರಾಜಕಾರಣಕ್ಕೆ ಬಂದಿದ್ದೀನಿ, ಒಂದಲ್ಲ ಒಂದು ದಿನ ಸಿಎಂ ಆಗುತ್ತೇನೆ… ಉತ್ತರ ಕರ್ನಾಟಕಕ್ಕೆ,…ಎನ್ನುತ್ತಿದ್ದರು’ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ರಾಜ್ಯ ಸಚಿವ ಸಂಪುಟದ ಸದಸ್ಯ, ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಯವರ ನಿಧನಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರ ಅಗಲಿಕೆ ಬಿಜೆಪಿ ಪಕ್ಷಕ್ಕೆ ಹಾಗು ರಾಜ್ಯದ ಜನತೆಗೆ ತುಂಬಲಾರದ ನಷ್ಟ. ಅವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ, ಅಭಿಮಾನಿ ವರ್ಗಕ್ಕೆ ಹಾಗೂ ಕಾರ್ಯಕರ್ತರ ಬಂಧುಗಳಿಗೆ ನೀಡಲಿ’ ಎಂದು ಪ್ರಾರ್ಥಿಸಿದ್ದಾರೆ.

ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಿದ್ದ ನೇರನುಡಿಯ ನಾಯಕ ಉಮೇಶ್ ಕತ್ತಿ’ ಎಂದು ಸಂಸದ ಪ್ರತಾಪ್‌ ಸಿಂಹ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ರಾಜ್ಯ ಸರ್ಕಾರದ ಹಿರಿಯ ಸಚಿವರು, ನನ್ನ ಆಪ್ತರಾದ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅವರ ನಿಧನದಿಂದ ರಾಜ್ಯ ಓರ್ವ ನುರಿತ ಮುತ್ಸದ್ಧಿ, ಕ್ರಿಯಾಶೀಲ ಹಾಗೂ ನಿಷ್ಠಾವಂತ ಜನಸೇವಕನನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬಕ್ಕೆ ನೀಡಲೆಂದು ಪ್ರಾರ್ಥನೆ’ ಎಂದು ಸಂಸದ ಸದಾನಂದ ಗೌಡ ಸಂತಾಪ ಸೂಚಿಸಿದ್ದಾರೆ.
ಸಂಸದ ಉಮೇಶ್‌ ಜಾಧವ್‌ ಅವರು ಸಂತಾಪ ಸೂಚಿಸಿ ಟ್ವೀಟಿಸಿದ್ದಾರೆ.

ಉಮೇಶ ಕತ್ತಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
‘ಉಮೇಶ ಕತ್ತಿ ಅವರು ರಾಜ್ಯದ ರಾಜಕಾರಣದಲ್ಲಿ ತಮ್ಮ ಕ್ರಿಯಾಶೀಲತೆ, ನೇರ, ನಿಷ್ಠುರತೆ ಹೆಸರಾಗಿದ್ದರು. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಅವರ ಅಕಾಲಿಕ ಅಗಲಿಕೆಯ ದುಃಖ‌ ಭರಿಸುವ ಶಕ್ತಿ ಕುಟುಂಬ ಹಾಗೂ ಅವರ ಅಪಾರ ಅಭಿಮಾನಿ ಬಳಗಕ್ಕೆ ಬರಲಿ’ ಎಂದು ಮಾಜಿ ಸಿಎಂ ಶೆಟ್ಟರ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿ: ಆಹಾರ, ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ ಕತ್ತಿ ಅವರ ಅಕಾಲಿಕ ನಿಧನ ತೀವ್ರ ಆಘಾತವನ್ಮುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಉಮೇಶ ಕತ್ತಿ ಹಾಗೂ ನಾನು ಬಹಳಷ್ಟು ವರ್ಷ ಜೆಡಿಎಸ್ ಪಕ್ಷದಲ್ಲಿ ಇದ್ದೇವು. ಬಹಳ ಆತ್ಮೀಯರಾಗಿದ್ದರು. ಉತ್ತರ ಕರ್ನಾಟಕ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಅವರು, ಸದಾ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿದ್ದರು. ಅವರ ಅಗಲಿಕೆ ಉತ್ತರ ಕರ್ನಾಟಕದ ಮುತ್ಸದ್ದಿ ನಾಯಕನನ್ನು ಕಳೆದುಕೊಂಂತಾಗಿದೆ.
ಅವರ ಅಗಲಿಕೆ ದುಃಖವನ್ಮು ಸಹಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೊರಟ್ಟಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button