ಆಸ್ಪತ್ರೆಯಲ್ಲಿ ಲಾಲು ಪ್ರಸಾದ್ ಯಾದವ್‌ಗೆ ಚಿಕಿತ್ಸೆ: ಮಗಳಿಂದ ಭಾವುಕ ಪೋಸ್ಟ್

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಸದ್ಯ ಪಾಟ್ನಾದ ಪಾರಸ್ ಆಸ್ಪತ್ರೆಯ ಐಸಿಎಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರದಂದು ಲಾಲು ಅವರು ಮನೆಯ ಮೆಟ್ಟಿಲುಗಳಿಂದ ಬಿದ್ದು ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಇದೀಗ ಲಾಲು ಪ್ರಸಾದ್ ಯಾದವ್ ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಜೊತೆಗೆ ಮಗಳು ರೋಹಿಣಿ ಆಚಾರ್ಯ ಫೋಟೋವನ್ನು ಹಂಚಿಕೊಂಡು ಭಾವನಾತ್ಮಕ ಪೋಸ್ಟ್ ಅನ್ನು ಬರೆದಿದ್ದಾರೆ.ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಲಾಲು ಅವರ ಎರಡು ಚಿತ್ರಗಳನ್ನು ರೋಹಿಣಿ ಹಂಚಿಕೊಂಡಿದ್ದಾರೆ.
ಫೋಟೋಗಳನ್ನು ಹಂಚಿಕೊಂಡು, “ಪಾಪಾ ನನಗೆ ಹೀರೋ ಇದ್ದಂತೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ” ಎಂದು ಹಾರೈಸಿದ್ದಾರೆ.ಫೋಟೋದಲ್ಲಿ ಲಾಲು ಅವರ ಪುತ್ರಿ ಮಿಸಾ ಭಾರತಿ ಕೂಡ ಕಾಣಿಸಿಕೊಂಡಿದ್ದಾರೆ.
ವಿಡಿಯೋ ಕಾಲ್ ಮೂಲಕ ತಂದೆ ಲಾಲು ಯಾದವ್ ಜೊತೆ ಮಾತನಾಡುತ್ತಿರುವ ಫೋಟೋ ಕಂಡುಬಂದಿದೆ. ರೋಹಿಣಿ ಆಚಾರ್ಯ ಹೀಗೆ ಬರೆದುಕೊಂಡಿದ್ದಾರೆ. “ನನ್ನ ನಾಯಕ, ನನ್ನ ಬೆಂಬಲ ತಂದೆ. ಬೇಗ ಚೇತರಿಸಿಕೊಳ್ಳಿ.
ಎಲ್ಲ ಅಡೆತಡೆಗಳಿಂದ ಮುಕ್ತಿ ಪಡೆದವನಿಗೆ ಕೋಟ್ಯಾಂತರ ಜನರ ಆಶೀರ್ವಾದವಿದೆ” ಎಂದು ಹೇಳಿದ್ದಾರೆ.ವೈದ್ಯರು ಹೇಳಿದ್ದೇನು?ಪಾರಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆಸಿಫ್ ಪ್ರಮಾಣ್ ಅವರು ಮಾತನಾಡಿದ್ದು, “ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಿದ್ದು ಬಲ ಭುಜದ ಮುರಿತಕ್ಕೆ ಒಳಗಾಗಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೇ ಇತರೆ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರನ್ನು ಐಸಿಯುನಲ್ಲಿ ನಿಗಾ ಇರಿಸಲಾಗಿದ್ದು, ಅವರ ಸ್ಥಿತಿ ಈಗ ಸ್ಥಿರವಾಗಿದೆ.
ಒಂದು ತಿಂಗಳ ಕಾಲ ಸೂಕ್ತ ವಿಶ್ರಾಂತಿ ತೆಗೆದುಕೊಳ್ಳುವಂತೆ ಮತ್ತು ಅಗತ್ಯವಿದ್ದರೆ ವೀಲ್ ಚೇರ್ ಬಳಸಲು ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಲಾಲು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಅವರನ್ನು ತಕ್ಷಣವೇ ಹತ್ತಿರದ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲು ಪ್ರಸಾದ್ ಮೇವು ಹಗರಣದಲ್ಲಿ ಆರೋಪಿಯಾಗಿದ್ದು, ಅರ್ಧಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಕಿಡ್ನಿ ಸೋಂಕು, ಶ್ವಾಸಕೋಶದಲ್ಲಿ ನೀರು ಶೇಖರಣೆ, ರಕ್ತದೊತ್ತಡ ಸೇರಿದಂತೆ ಹಲವು ಆರೋಗ್ಯ ಸಂಬಂಧಿ ಕಾಯಿಲೆಗಳಿಂದ ಲಾಲು ಬಳಲುತ್ತಿದ್ದಾರೆ.