
ಆಸ್ತಿಗಾಗಿ ತನ್ನ ಸ್ವಂತ ತಾತನನ್ನೇ ಕೊಲೆ ಮಾಡಿದ್ದ ಮೊಮ್ಮಗ ಸೇರಿದಂತೆ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಜಯಂತ್ ಅಲಿಯಾಸ್ ಬಳ್ಳೆ(20) ಮತ್ತು ಈತನ ಸ್ನೇಹಿತ ಹಾಸನ ಜಿಲ್ಲೆಯ ಗೊರೂರು ನಿವಾಸಿ ಯಾಸೀನ್(22) ಬಂಧಿತರು. ಯಲಹಂಕದ ಸುರಭಿಲೇಔಟ್, 2ನೇ ಮುಖ್ಯರಸ್ತೆಯಲ್ಲಿ ಪುಟ್ಟಯ್ಯ(70) ಎಂಬುವರು ವಾಸವಾಗಿದ್ದು, ಆ.17ರಂದು ಮುಂಜಾನೆ ಅವರ ಕೊಲೆಯಾಗಿತ್ತು.
ಯಲಹಂಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪುಟ್ಟಯ್ಯ ಅವರ ಮೈಮೇಲಿದ್ದ ಚಿನ್ನದ ಒಡವೆಗಳನ್ನು ದೋಚುವ ಉದ್ದೇಶದಿಂದ ಕೊಲೆ ಮಾಡಿರುತ್ತಾರೆಂದು ದೂರು ನೀಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಪುಟ್ಟಯ್ಯ ಅವರ ಮೊಮ್ಮಗನ ಮೇಲೆಯೇ ಸಂಶಯಬಂದು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಪುಟ್ಟಯ್ಯ ಅವರ ಸ್ವಂತ ಮೊಮ್ಮಗನಾದ ಜಯಂತ್, ತಮ್ಮ ತಾತ ಆಸ್ತಿ ವಿಭಾಗ ಮಾಡಿಕೊಡುತ್ತಿಲ್ಲವೆಂದು ಹಾಗೂ ಬ್ಯಾಂಕ್‍ನಲ್ಲಿ ಲೋನ್ ಪಡೆದುಕೊಳ್ಳಲು ಸಹಕರಿಸುತ್ತಿಲ್ಲವೆಂದು ಅವರನ್ನು ಕೊಲೆ ಮಾಡಿಯಾದರೂ ಆಸ್ತಿಯನ್ನು ಭಾಗ ಮಾಡಿಕೊಳ್ಳಲು ತೀರ್ಮಾನಿಸಿಕೊಂಡು ಕೊಲೆಗೆಸಂಚು ರೂಪಿಸಿ ಅಂದು ತನ್ನ ಗೆಳೆಯ ಯುಪಿನೊಂದಿಗೆ ಸೇರಿ ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಮಾರ್ಗದರ್ಶನದಲ್ಲಿ ಎಸಿಪಿ ಮಂಜುನಾಥ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಬಾಲಾಜಿ ಅವರನ್ನೊಳಗೊಂಡ ಸಿಬ್ಬಂದಿ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.