ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ICUಗೆ ದಾಖಲು

ರಾಷ್ಟ್ರೀಯ ಜನತಾ ದಳ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
ಭಾನುವಾರ ಮುಂಜಾನೆ, ಮೆಟ್ಟಿಲುಗಳಿಂದ ಬಿದ್ದು, ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು.
ಲಾಲು ಯಾದವ್ ಅವರಿಗೆ ಬೆನ್ನಿಗೂ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.ರಾಬ್ರಿ ದೇವಿ ನಿವಾಸದಲ್ಲಿ ಮೆಟ್ಟಿಲುಗಳಿಂದ ಬಿದ್ದಿರುವ ಲಾಲೂ ಪ್ರಸಾದ್ ಯಾದವ್ :ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ಪಾಟ್ನಾದಲ್ಲಿರುವ ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಿವಾಸದಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲೇ ಅವರು ಮೆಟ್ಟಿಲುಗಳಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಇದಾದ ನಂತರ, ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಲಾಲು ಯಾದವ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.
ಲಾಲು ಯಾದವ್ ಅವರ ಭುಜದ ಮೂಳೆ ಮುರಿತ : ಲಾಲು ಪ್ರಸಾದ ಯಾದವ್ ಅವರ ಭುಜದ ಮೂಳೆ ಮುರಿತವಾಗಿದೆ ಎಂದು ಅವರ ಆಪ್ತರು ಹೇಳಿದ್ದಾರೆ.
ಮೆಟ್ಟಿಲುಗಳಿಂದ ಬಿದ್ದ ಕೂಡಲೇ ಅವರಿಗೆ ಕ್ರೇಪ್ ಬ್ಯಾಂಡೇಜ್ ಹಾಕಲಾಗಿದೆ. ಇದೀಗ ವೈದ್ಯರು ಅವರನ್ನು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ.
ಭುಜದ ಮೂಳೆ ಮುರಿತ ಮಾತ್ರವಲ್ಲದೆ ಬೆನ್ನಿನ ಭಾಗಕ್ಕೂ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಹಲವು ಕಾಯಿಲೆಗಳಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್ :ಲಾಲು ಯಾದವ್ ಈಗಾಗಲೇ ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಈ ಕಾರಣದಿಂದ ಜೈಲಿನಲ್ಲಿದ್ದ ಅವಧಿಯಲ್ಲೂ ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು, ಮಾತ್ರವಲ್ಲದೆ, ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು.
ಲಾಲು ಪ್ರಸಾದ್ ಯಾದವ್ ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಕಿಡ್ನಿ ರೋಗ, ಒತ್ತಡ, ತಲಸ್ಸೇಮಿಯಾ, ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆ, ಯೂರಿಕ್ ಆಸಿಡ್ ಹೆಚ್ಚಳ, ಮಿದುಳು ಸಂಬಂಧಿತ ಕಾಯಿಲೆ, ದುರ್ಬಲ ರೋಗನಿರೋಧಕ ಶಕ್ತಿ, ಬಲ ಭುಜದ ಮೂಳೆ ಸಮಸ್ಯೆ, ಕಾಲು ಮೂಳೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿರುವ ಲಾಲು : ಮೇವು ಹಗರಣದ ಹಲವು ಪ್ರಕರಣಗಳಲ್ಲಿ ದೋಷಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಕೆಲವು ತಿಂಗಳ ಹಿಂದೆ ಜಾಮೀನು ನೀಡಿತ್ತು.