
545 PSI ನೇಮಕಾತಿ ಅಕ್ರಮದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ವಿಚಾರಗಳು ಹೊರಬೀಳುತ್ತಿವೆಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ, ಎಷ್ಟೇ ಚಾಣಾಕ್ಷನಾಗಿದ್ದರೂ ನಾವು ಹೆಡೆಮುರಿಕಟ್ಟುತ್ತೇವೆ ಅಕ್ರಮದಲ್ಲಿ ಭಾಗಿಯಾದವರ ಬಂಧನಕ್ಕೆ ಸೂಚನೆ ನೀಡಲಾಗಿದೆ ಎಂದ ಸಿಎಂ ಬಸವರಾಜ್ ಬೊಮ್ಮಾಯಿ.
ಪಿಎಸ್‌ಐ ಪರೀಕ್ಷೆ ಅಕ್ರಮದ ಕುರಿತಾಗಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ ಆಡಿಯೋ ಬಗ್ಗೆಯೂ ತನಿಖೆ ಆಗಲಿದೆ. ಎಲ್ಲಾ ಆಯಾಮದಲ್ಲೂ ತನಿಖೆ ಆಗಲಿದೆ. ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಎಂ ಬೊಮ್ಮಾಯಿ ಹೇಳಿಕೆ ಉಲ್ಲೇಖಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಪಿಎಸ್‍ಐ ಅಕ್ರಮದ ಆಡಿಯೋ ಬಿಡುಗಡೆ ಮಾಡಿದ್ದ ಪ್ರಿಯಾಂಕಾ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ಬಿಜೆಪಿ ತಿರುಗೇಟು ನೀಡಿದೆ. ‘ಮಹಾಂತೇಶ್ ಪಾಟೀಲ್ ಹಾಗೂ ಅವರ ಸೋದರ ಆರ್.ಡಿ.ಪಾಟೀಲ್ ಖರ್ಗೆ ಕುಟುಂಬ ಹಾಗೂ ಕಾಂಗ್ರೆಸ್ ಜೊತೆಗೆ ಹೊಂದಿರುವ ಸಾಂಗತ್ಯದ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಏಕೆ ಮೌನವಾಗಿದ್ದಾರೆ? ಪ್ರಿಯಾಂಕ್ ಖರ್ಗೆ ಹೇಳುತ್ತಿರುವ ದಿನಕ್ಕೊಂದು ಸುಳ್ಳು ಅಟೆನ್ಷನ್ ಡೈವರ್ಶನ್ ಮಾಡುವ ತಂತ್ರವಷ್ಟೇ’ ಅಂತಾ ಟೀಕಿಸಿದೆ.
‘ಪಿಎಸ್‌ಐ ನೇಮಕ ಅಕ್ರಮದಲ್ಲಿ ಹೊರ ಬೀಳುತ್ತಿರುವ ದಾಖಲೆ, ಶಾಮೀಲಾದ ವ್ಯಕ್ತಿಗಳು, ಬಂಧಿತರಾದ ವ್ಯಕ್ತಿಗಳ ಹಿನ್ನೆಲೆಯೆಲ್ಲವೂ ಕಾಂಗ್ರೆಸ್ ಪ್ರಭಾವಿ ನಾಯಕರ ನಿಕಟ ಸಂಪರ್ಕವನ್ನು ಸೂಚಿಸುತ್ತಿದೆ. ಹಗರಣದಲ್ಲಿ ಸಿಕ್ಕಿ ಬೀಳುತ್ತಿರುವ ಆರೋಪಿಗಳೆಲ್ಲರೂ ಖರ್ಗೆ ಕುಟುಂಬದ ಮನೆಯ ಸುತ್ತ ಗಿರಕಿ ಹೊಡೆಯುವವರೇ ಆಗಿದ್ದಾರೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸಿಐಡಿ ನೀಡಿರುವ ನೋಟಿಸ್ ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿರುವ ಬಿಜೆಪಿ, ‘ಮಾಧ್ಯಮದವರ ಮುಂದೆ ಪತ್ರಿಕಾಗೋಷ್ಠಿ ನಡೆಸುವಾಗ ತನಿಖಾ ಅಧಿಕಾರಿಯಂತೆ ವರ್ತಿಸಿದ ಪ್ರಿಯಾಂಕ್ ಖರ್ಗೆ ಇದೀಗ ಪೊಲೀಸರು ತನಿಖೆಗೆ ಸಹಕರಿಸುವಂತೆ ಕೇಳಿದಾಗ ಬೆಚ್ಚಿ ಬಿದ್ದಿದ್ದಾರೆ. ಮಾಧ್ಯಮದ ಮುಂದೆ ಹೋಗುವಾಗಿದ್ದ ಸಾಕ್ಷ್ಯ, ಆಡಿಯೋ ಟೇಪ್ ಈಗೇನಾಗಿದೆ? ನೇಮಕಾತಿ ಹಗರಣದ ತನಿಖೆ ಚುರುಕಾಗುತ್ತಿರುವಂತೆ ನಿಮ್ಮ ನೆಲ ಅಲುಗಾಡಿತೇ?’ ಎಂದು ವ್ಯಂಗ್ಯವಾಡಿದೆ.