ಆರಿದ್ರಾ ಅಬ್ಬರ ಜನಜೀವನ ಅಸ್ತವ್ಯಸ್ತ

ರಾಜ್ಯದ ಹಲವೆಡೆ ಮಹಾಮಳೆಯ ರುದ್ರ ನರ್ತನ ಮುಂದುವರದಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕರ್ನಾಟಕದಲ್ಲೂ ಪ್ರವಾಹದ ಭೀತಿ ಎದುರಾಗಿದೆ. ಇನ್ನೂ ಕೆಲ ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು, ಹಾಸನ, ಚಿಕ್ಕಮಗಳೂರು ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕೊಡಗು ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸಾ, ಎನ್‌ಆರ್ ಪುರ, ಮೂಡಿಗೆರೆ ತಾಲ್ಲೂಕುಗಳಲ್ಲಿ ರಜೆ ಘೋಷಿಸಲಾಗಿದೆ.
ಮಲೆನಾಡಿನಲ್ಲಿ ವರುಣನ ಭೋರ್ಗರೆತ ಮುಂದುವರೆದಿದ್ದು, ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ್‌ಫಾಲ್ಸ್ ಧುಮುಕ್ಕುತ್ತಿರುವ ದೃಶ್ಯ ನಯನ ಮನೋಹರವಾಗಿದೆ. ಜೋಗ್ ಜಲಪಾತದಲ್ಲಿ ಇಬ್ಬನಿ ಕಣ್ಣಾಮುಚ್ಚಾಲೆಯಾಡುತ್ತಿದ್ದು, ಪ್ರವಾಸಿಗರು ಈ ಅಭೂತಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ-೬೬ ಜಲಾವೃತಗೊಂಡಿದೆ. ಕಾರವಾರ ನಗರದ ಬಿಣಗ ರಸ್ತೆಂiiಲ್ಲಿ ಟ್ರಾಫಿಕ್‌ಜಾಮ್ ಉಂಟಾಗಿದ್ದು, ೫ ಕಿ.ಮೀವರೆಗೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ೮ ಮನೆಗಳಿಗೆ ಹಾನಿಯಾಗಿದೆ. ೪ ಮನೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ೮೧ ವಿದ್ಯುತ್ ಕಂಬಗಳು ಧರೆಗುರುಳಿವೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಸಿದ್ದಾಪುರ, ಕುಮಟ, ಭಟ್ಕಳ ತಾಲ್ಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಮೂರು ತಾಲ್ಲೂಕುಗಳಲ್ಲಿ ಅಪಾರ ಹಾನಿ ಸಂಭವಿಸಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.ಕಾರವಾರ, ಕುಮಟ ಹಾಗೂ ಹೊನ್ನಾವರ ತಾಲ್ಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದವರಿಗೆ ಆಶ್ರಯ ಕಲ್ಪಿಸಲಾಗಿದೆ. ಕಳೆದ ಒಂದುವಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ ೪೯೬೦ ಮಿ.ಮೀ ಮಳೆಯಾಗಿ ಭಾರಿ ಅವಾಂತರ ಸೃಷ್ಟಿಯಾಗಿ, ೯೧ ಮನೆಗಳು ಹಾನಿಗೊಳಗಾಗಿವೆ.
ಮಳೆಯಿಂದಾಗಿ ಓರ್ವ ಸಾವನ್ನಪ್ಪಿದ್ದು, ೨ ಜಾನುವಾರುಗಳು ಸಾವನ್ನಪ್ಪಿವೆ.ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಭರ್ತಿಯಾಗಿದ್ದು, ಸುತ್ತಮುತ್ತಲ ಮನೆಗಳಿಗೆ ನೀರು ನುಗ್ಗಿವೆ.
ಭಟ್ಕಳ ತಾಲ್ಲೂಕಿನ ಚೌಥನಿ ಸೇತುವೆ ಮುಳುಗಿ ಹೋಗಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಗಿದೆ. ಪಟ್ಟಣದಿಂದ ಪುರನಗರಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿದು ಹೋಗಿದೆ.
ಅಪಾರ ಪ್ರಮಾಣದ ಬೆಳೆ ನೀರು ಪಾಲಾಗಿವೆ.ರಾಷ್ಟ್ರೀಯ ಹೆದ್ದಾರಿ ೬೬ರ ಹಂಚಿನ ಮಾರುತಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ತುರ್ತು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿಗ್ರಾಮ ಪಂಚಾಯ್ತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರ ಜತೆಗೆ ನಿಯಂತ್ರಣ ಕೊಠಡಿ ತೆರೆದು ೨೪ ಗಂಟೆಯೂ ಯಾವುದೇ ಸಮಸ್ಯೆ ಎದುರಾದರೂ ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಕೆಲವೆಡೆ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ನಾಳೆಯವರೆಗೆ ಜಿಲ್ಲೆಯಾದ್ಯಂತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪರಿಸ್ಥಿತಿ ಎದುರಿಸಲು ಕ್ರಮ ಕೈಗೊಂಡಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಜಾಲ್ಸೂರು ಬಳಿ ಗುಡ್ಡ ಕುಸಿದು ಬೈಕ್‌ಗಳ ಮೇಲೆ ಬಿದ್ದಿದೆ. ಇದರಿಂದಾಗಿ ಜನರು ಭಯಭೀತರಾಗಿ ಓಡಿ ಹೋಗಿದ್ದಾರೆ.ಉಡುಪಿಯ ಬೈಂದೂರು ತಾಲ್ಲೂಕಿನ ಸೌಪರ್ಣಿಕಾ ನದಿ ಉಕ್ಕಿ ಹರಿಯುತ್ತಿದೆ.
ಇದರಿಂದಾಗಿ ನಾವುಂದ ಗ್ರಾಮದ ಕೆಲವು ಮನೆಗಳ ಆವರಣಕ್ಕೆ ನೀರು ನುಗ್ಗಿದೆ.ಗಂಗಾವಳಿ ನದಿಯಲ್ಲಿ ದೋಣಿಯಲ್ಲಿ ಅಪಾಯಕ್ಕೆ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ. ಯಲ್ಲಾಪುರ ಹಾಗೂ ಸಿದ್ದಾಪುರದಲ್ಲಿ ಮಳೆ ಮುಂದುವರೆದಿದ್ದು, ಗಂಗಾವಳಿ ಹಾಗೂ ಅಗನಾಶಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಲ್ಲಡ್ಕ, ಅಮ್ಟೂರು ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಬೃಹತ್ ಗಾತ್ರೆ ಹೊಂಡ ನಿರ್ಮಾಣವಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಕಿ.ಮೀ ಗಟ್ಟಲೆ ವಾಹನಗಳು ನಿಂತಿವೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕೆ.ಎಲ್.ಆರ್.ಸಿ ಕಂಪನಿ ಗುಂಡಿ ಮುಚ್ಚುವ ಕಾರ್ಯಕೈಗೊಂಡಿದೆ.
ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಅರಕಲಗೂಡುವಿನಲ್ಲಿ ಮಳೆ ಸುರಿಯುತ್ತಿದ್ದು, ಬಹುತೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ನೆರೆಯ ಮಹಾರಾಷ್ಟ್ರದಲ್ಲಿ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂದ್‌ಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ.
ರಾಯಚೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಏಕ್‌ಮಿನಾರ್ ಬಳಿ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದಿದೆ.
ವರುಣನ ಆರ್ಭಟಕ್ಕೆ ಬೆಳೆಗಳು ನೀರಿನಲ್ಲಿ ಮುಳುಗಿವೆ.ಮಹಾ ಮಳೆಯ ಹೊಡೆತಕ್ಕೆ ರಾಜ್ಯದ ನದಿಗಳು ಉಕ್ಕಿ ಹರಿಯುತ್ತಿವೆ.
ಜಲಾಶಯಗಳಲ್ಲಿ ನೀರಿನ ಅಪಾಯಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿಪಾತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.ಕಬಿನಿ ಭರ್ತಿಗೆ ೮ ಅಡಿಕೇರಳದ ವಯನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಮೈಸೂರಿನ ಕಬಿನಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾಶಯ ಭರ್ತಿಗೆ ೮ ಅಡಿ ಮಾತ್ರ ಬಾಕಿ ಉಳಿದಿದೆ. ಜಲಾಶಯ ಒಳ ಹರಿವು ೧೮,೫೪೬ ಕ್ಯೂಸೆಕ್ ಹೆಚ್ಚಳವಾಗಿದೆ.ರಾಯಚೂರು ಜಿಲ್ಲೆಯ ಬಸವ ಸಾಗರ ಜಲಾಶಯ ಭರ್ತಿಗೆ ೧ ಮಿ. ಮಾತ್ರ ಬಾಕಿ ಇದೆ. ಪ್ರಸ್ತುತ ಜಲಾಶಯದಲ್ಲಿ ೪೯೧.೦೨ ಮೀ. ನೀರಿದೆ. ಕೃಷ್ಣಾ ಭೋರ್ಗರೆಯುತ್ತಿರುವುದರಿಂದ ಯಾವುದೇ ಸಮಯದಲ್ಲಿ ಅಣೆಕಟ್ಟೆಯಿಂದ ನೀರು ಬಿಡುವ ಸಾಧ್ಯತೆ ಇದೆ.
ಇದರಿಂದಾಗಿ ಲಿಂಗಸಗೂರು, ರಾಯಚೂರು ಜನರಿಗೆ ನೆರೆಯ ಭೀತಿ ಎದುರಾಗಿದೆ. ಕೃಷ್ಣಾ ನೆರೆ ಹಾವಳಿ ತಪ್ಪಿಸಲು ಸಂತಸ್ಥರ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಸಿದ್ಧವಾಗಿದೆ.ಹೊಸಪೇಟೆಯ ತುಂಗಭದ್ರಾ ಜಲಾಶಯ ಭಾರಿ ಮಳೆಯಿಂದಾಗಿ ಭರ್ತಿಯಾಗಿದೆ. ೧೦೫.೭೮ ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ೧,೬೩೩ ಅಡಿ ಭರ್ತಿಯಾಗಿದೆ.
ಇದರಿಂದಾಗಿ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.ಕೆಆರ್‌ಎಸ್ ಭರ್ತಿಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಈ ಅಣೆಕಟ್ಟು ಭರ್ತಿಯಾಗಲು ೫ ಅಡಿ ಮಾತ್ರ ಬಾಕಿ ಇದೆ.೩೮,೮೫೮ ಸಾವಿರ ಕ್ಯೂಸೆಕ್‌ನಷ್ಟು ಒಳಹರಿವಿದ್ದು, ಅಣಕಟ್ಟೆಯ ಗರಿಷ್ಠಮಟ್ಟ ೧೨೪.೮ ಅಡಿ ಇದೆ. ಜಲಾಶಯದಲ್ಲಿಂದು ೧೧೯.೪೪ ಅಡಿಯಷ್ಟು ನೀರಿದೆ.
ಜಲಾಶಯಕ್ಕೆ ೩,೨೭೦ ಕ್ಯೂಸೆಕ್ ನೀರು ಹೊರ ಅರಿವಿದ್ದು, ಜಲಾಶಯದಲ್ಲಿ ಈಗ ಒಟ್ಟು ೪೯.೪೫೨ ಟಿಎಂಸಿ, ಇಂದು ೪೨.೩೪೧ ಟಿಎಂಸಿ ನೀರು ಸಂಗ್ರಹವಾಗಿದೆ.