ಆಯುಷ್ಮಾನ್ ಕಾರ್ಡ್‍ದಾರರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ನಿರ್ಧಾಕ್ಷಿಣ್ಯ ಕ್ರಮ

ಆಯುಷ್ಮಾನ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಯಾವುದೇ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂಥವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಶಾಸಕ ಹರತಾಳ್ ಹಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ ಆಸ್ಪತ್ರೆಗಳು ಕಡ್ಡಾಯವಾಗಿ ಚಿಕಿತ್ಸೆಯನ್ನು ಕೊಡಲೇಬೇಕು. ಒಂದು ವೇಳೆ ಯಾರಾದರೂ ಚಿಕಿತ್ಸೆ ಕೊಡಲು ನಿರಾಕರಿಸಿರುವುದು ನನ್ನ ಗಮನಕ್ಕೆ ಬಂದರೆ ತಕ್ಷಣವೇ ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಸಿದರು.
ಆಯುಷ್ಮಾನ್ ಕಾರ್ಡ್ ಪಡೆಯಬೇಕಾದರೆ ಜಿಲ್ಲಾಸ್ಪತ್ರೆಗಳಿಂದ ಶಿಫಾರಸ್ಸು ಪತ್ರ ಕಡ್ಡಾಯ ಮಾಡಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ , ಕರ್ನಾಟಕ ಯೋಜನೆಯಡಿ 1650 ಚಿಕಿತ್ಸೆ ಪ್ಯಾಕೇಜ್‍ಗಳಲ್ಲಿ 171 ತುರ್ತು ಚಿಕಿತ್ಸೆ ವಿಧಾನಗಳನ್ನು ಪಡೆಯಬಹುದು. ನೊಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಚಿಕಿತ್ಸೆ ನೀಡಬೇಕು.
ವಿಶೇಷವಾಗಿ ತುರ್ತು ಸಂದರ್ಭಗಳಲ್ಲಿ ಯಾವುದೇ ಶಿಫಾರಸ್ಸು ಪತ್ರ ಇರುವುದಿಲ್ಲ. ಕಡ್ಡಾಯವಾಗಿ ಚಿಕಿತ್ಸೆ ನೀಡಲು ವೈದ್ಯರಿಗೆ ನೀಡಲಾಗಿದೆ ಎಂದರು.ತುರ್ತು ಚಿಕಿತ್ಸಾ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿ ಕಂಪ್ಯೂಟರ್ ಆಧಾರಿತ ಆನ್‍ಲೈನ್ ರೆಫೆರೆನ್ಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇದು ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯ ಅನುಷ್ಠಾನ ಮಾಡಿದೆ ಎಂದು ಹೇಳಿದರು.