ಆಫ್ಘನ್‌ನಲ್ಲಿರುವ 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ ಇ-ವೀಸಾ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ದಾಳಿ ನಡೆಸಿದ ನಂತರ ಭಾರತ ಸರ್ಕಾರ ಅಲ್ಲಿನ ಸಿಖ್ಖರು ಹಾಗೂ ಹಿಂದೂಗಳನ್ನು ರಕ್ಷಿಸಲು ಮುಂದಾಗಿದೆ.
ಆಫ್ಘನ್‌ನಲ್ಲಿರುವ 100ಕ್ಕೂ ಹೆಚ್ಚು ಸಿಖ್ಖರು ಹಾಗೂ ಹಿಂದೂಗಳಿಗೆ ಇ-ವೀಸಾ ನೀಡುತ್ತಿದೆ. ನಿನ್ನೆ ತಡರಾತ್ರಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಗುರುದ್ವಾರದ ಮೇಲಿನ ದಾಳಿಯ ಹೊಣೆಯನ್ನು ಇಸ್ಲಾಮಿಕ್ಸ್ ಸ್ಟೇಟ್ಸ್ ಖೊರಾಸನ ಪ್ರಾಂತ್ಯ (ISKP) ಹೊತ್ತಿದ್ದು, `ಅಬು ಮೊಹಮ್ಮದ್ ಅಲ್ ತಾಜಕಿ’ ಮುಸ್ಲಿಂ ಸಂಘಟನೆ ಮೂರು ಗಂಟೆಗಳ ಕಾಲ ದಾಳಿ ನಡೆಸಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನೂ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ.
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ತೆ ಪರ್ವಾನ್ ಪ್ರದೇಶವನ್ನು ಸುತ್ತುವರಿದಿದ್ದ ಸೇನಾ ಪಡೆಗಳು ಹಲವು ದಾಳಿಕೋರರನ್ನು ಕೊಂದಿದೆ. ಆದರೆ ನಿಖರ ಅಂಕಿ-ಅಂಶಗಳು ಸಿಕ್ಕಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಏನಿದು ಘಟನೆ?
ಅಫ್ಘಾನಿಸ್ತಾನದ ರಾಜಧಾನಿಯಲ್ಲಿರುವ ಕಾರ್ತೆ ಪರ್ವಾನ್ ಗುರುದ್ವಾರದಲ್ಲಿ ನಿನ್ನೆ ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಹಲವು ಸ್ಫೋಟಗಳಿಂದ ಸಾವು ನೋವುಗಳಾಗಿದ್ದವು. ದಾಳಿಯಲ್ಲಿ ಸಿಖ್ಖ್ ವ್ಯಕ್ತಿ ಹಾಗೂ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಈ ದಾಳಿಯ ಹಿಂದೆ ಐಸಿಸ್ ಖೊರಾಸನ್ ಕೈವಾಡವಿದೆ ಎಂದು ಶಂಕಿಸಲಾಗಿತ್ತು. ಅಫ್ಘಾನಿಸ್ತಾನದ ಭದ್ರತಾಪಡೆಗಳು ಈ ಪ್ರದೇಶವನ್ನು ಸುತ್ತುವರಿದು ಭಯೋತ್ಪಾದಕರ ವಿರುದ್ಧ ಹೋರಾಟ ಮುಂದುವರಿಸಿದ್ದವು. ಇದರಿಂದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಸ್ಥಿತಿಯ ಮೇಲೆ ನಿಗಾ ಇರಿಸಿತ್ತು. ಇಂದು ಅಲ್ಲಿನ ಸಿಖ್ಖ್ ಹಾಗೂ ಹಿಂದೂಗಳಿಗೆ ಆದ್ಯತೆ ಮೇರೆಗೆ ಇ-ವೀಸಾ ನೀಡಲು ಸರ್ಕಾರ ಮುಂದಾಗಿದೆ.