
ಸುಲಭವಾಗಿ ಸಾಲ ನೀಡಿ, ಹೆಚ್ಚಿನ ಬಡ್ಡಿ ಹೊರೆಯನ್ನು ವಿಧಿಸಿ ಗ್ರಾಹಕರನ್ನು ಪೀಡಿಸುತ್ತಿದ್ದ ಅಕ್ರಮ ಲೋನ್ ಆ್ಯಪ್‌ಗಳಿಗೆ ತಡೆಯೊಡ್ಡಲು ಕೇಂದ್ರ ಸರಕಾರ ಮುಂದಾಗಿದೆ.
ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕಾನೂನುಬದ್ಧ ಲೋನ್ ಆ್ಯಪ್‌ಗಳ ‘ಶ್ವೇತಪಟ್ಟಿ’ (ವೈಟ್‌ಲಿಸ್ಟ್) ಸಿದ್ಧಗೊಳಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ವಿತ್ತ ಸಚಿವರು ಸೂಚಿಸಿದ್ದು, ಆ ಪಟ್ಟಿಯಲ್ಲಿರುವ ಆ್ಯಪ್‌ಗಳಷ್ಟೇ
‘ಗೂಗಲ್ ಪ್ಲೇ ಸ್ಟೋರ್’ ಮತ್ತು ‘ಆ್ಯಪಲ್ ಆ್ಯಪ್ ಸ್ಟೋರ್’ನಲ್ಲಿ ಉಳಿಯಲಿವೆ. ಇದರಿಂದಾಗಿ ಅಕ್ರಮ ಮತ್ತು ಕಾನೂನುಬದ್ಧ ಆ್ಯಪ್‌ಗಳನ್ನು ಗ್ರಾಹಕರು ಗುರುತಿಸಲು, ಎಚ್ಚರ ವಹಿಸಲು ಸಾಧ್ಯವಾಗಲಿದೆ.
ಶ್ವೇತಪಟ್ಟಿ’ಯಲ್ಲಿನ ಕಾನೂನುಬದ್ಧ ಆ್ಯಪ್‌ಗಳಷ್ಟೇ ‘ಪ್ಲೇ ಸ್ಟೋರ್’ಗಳಲ್ಲಿ ಲಭ್ಯವಿವೆ ಎನ್ನುವುದನ್ನು ಖಚಿತಪಡಿಸುವ ಹೊಣೆಗಾರಿಕೆಯನ್ನು ವಿತ್ತ ಸಚಿವರು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಒಪ್ಪಿಸಿದ್ದಾರೆ.
ಅಲ್ಲದೇ, ಅಕ್ರಮ ಆ್ಯಪ್‌ಗಳನ್ನು ತೆರವುಗೊಳಿಸುವ ಹೊಣೆಗಾರಿಕೆಯನ್ನೂ ಒಪ್ಪಿಸಿದ್ದಾರೆ. ಈ ಕ್ರಮದಿಂದಾಗಿ ಅಕ್ರಮ ಲೋನ್ ಆ್ಯಪ್‌ಗಳ ಕಾಟ ತಪ್ಪಲಿದೆ.
ದೇಶದಲ್ಲಿ ಹೆಚ್ಚುತ್ತಿರುವ ಇಂಥ ಪ್ರಕರಣಗಳ ಬಗ್ಗೆ ವಿತ್ತ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಸಾಲ ವಸೂಲಿಗೆ ಬ್ಲಾಕ್‌ಮೇಲಿಂಗ್, ಕ್ರಿಮಿನಲ್ ಬೆದರಿಕೆ ಇತ್ಯಾದಿಗಳನ್ನು ಮಾಡುತ್ತಿರುವ ಅಕ್ರಮ ಆ್ಯಪ್‌ಗಳ ನಿಯಂತ್ರಿಸುವ ಸಂಬಂಧ ವಿತ್ತ ಸಚಿವರು, ಹಣಕಾಸು, ಕಾರ್ಪೋರೇಟ್ ವ್ಯವಹಾರ, ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ನಡೆದ ಸೆ. 8ರ ಸಭೆಯಲ್ಲಿ ಚರ್ಚಿಸಿದ್ದಾರೆ. ಸಭೆಯಲ್ಲಿ ಆರ್‌ಬಿಐ ಅಧಿಕಾರಿಗಳೂ ಉಪಸ್ಥಿತರಿದ್ದರು.
ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಕ್ರಮ ಆನ್‌ಲೈನ್‌ನಲ್ಲಿ ವಂಚನೆ ಮಾಡಲು ಬಳಕೆಯಾಗುವ ಇಂಟರ್‌ನೆಟ್ ಪ್ರೋಟೋಕಾಲ್ (ಐಪಿ) ವಿಳಾಸ ಮತ್ತು ಫೋನ್ ನಂಬರ್‌ಗಳನ್ನು ಸಂಗ್ರಹಿಸಿ, ಅವುಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಸರಕಾರ ಮುಂದಾಗಿದೆ.
ಸಾಮಾನ್ಯ ಜನರೇ ಟಾರ್ಗೆಟ್‌ವಿಶೇಷವಾಗಿ ದುರ್ಬಲ ಮತ್ತು ಕಡಿಮೆ-ಆದಾಯದ ಗುಂಪಿನ ಜನರನ್ನು ಗುರಿಯಾಗಿಸಿಕೊಂಡು ಈ ಅಕ್ರಮ ಲೋನ್ ಆ್ಯಪ್‌ಗಳು ಕಾರ್ಯ ನಿರ್ವಹಿಸುತ್ತಿವೆ.
ಒಂದೆರಡು ಸುಲಭ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ, ಕೆಲವು ವಿವರಗಳನ್ನು ನೀಡಿದರೆ ಸಾಲವನ್ನು ಸುಲಭವಾಗಿ ಈ ಆ್ಯಪ್‌ಗಳು ವಿತರಿಸುತ್ತವೆ.
ಅಧಿಕ ಸಂಸ್ಕರಣಾ ಶುಲ್ಕ ಮತ್ತು ಗುಪ್ತ ಶುಲ್ಕಗಳನ್ನು ಈ ಸಾಲಗಳು ಒಳಗೊಂಡಿರುತ್ತವೆ. ಇದಕ್ಕೂ ಮಿಗಿಲಾಗಿ ಅತಿಯಾದ ಬಡ್ಡಿದರವನ್ನೂ ವಿಧಿಸುತ್ತವೆ.
ಸಾಲವನ್ನು ಸುಲಭವಾಗಿ ನೀಡಿ, ಅದರ ವಸೂಲಿಗೆ ಅಕ್ರಮ ಮಾರ್ಗಗಳನ್ನು ಈ ಆ್ಯಪ್‌ಗಳು ಅನುಸರಿಸುತ್ತವೆ. ಬ್ಲಾಕ್‌ಮೇಲ್‌ಗೂ ಮುಂದಾಗುತ್ತವೆ. ಕ್ರಿಮಿನಲ್ ಬೆದರಿಕೆಯನ್ನೂ ಒಡ್ಡುತ್ತವೆ.
ಸಾಲ ಪಡೆಯುವಾಗ ಹುಷಾರು!
* ಅಕ್ರಮ ಲೋನ್ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿಇನ್‌ಸ್ಟಾಲ್ ಮಾಡಿಕೊಳ್ಳಬೇಡಿ.