
ನಕಲಿ ದಾಖಲೆಗಳನ್ನು ಸಲ್ಲಿಸಿ ಮೊಬೈಲ್ ಸಿಮ್ ಕಾರ್ಡ್ ಪಡೆಯುವುದು, ವಾಟ್ಸ್‌ಆ್ಯಪ್, ಸಿಗ್ನಲ್, ಟೆಲಿಗ್ರಾಮ್‌ನಂತಹ ಒವರ್ ದಿ ಟಾಪ್ (ಒಟಿಟಿ) ವೇದಿಕೆಗಳಲ್ಲಿ ನಕಲಿ ಐಡೆಂಟಿಟಿ ತೋರಿಸಿಕೊಳ್ಳುವ ಮಂದಿಗೆ, ಇನ್ನು ಮುಂದೆ ಒಂದು ವರ್ಷ ಜೈಲು ಶಿಕ್ಷೆಯಾಗಬಹುದು!
ಇಲ್ಲವೇ, 50 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ.ಇಂಥಹದ್ದೊಂದು ಕಠಿಣ ನಿಯಮವು ಟೆಲಿಕಮ್ಯೂನಿಕೇಷನ್ಸ್ ಕರಡು ವಿಧೇಯಕದಲ್ಲಿದೆ.
ಇದು ಜಾರಿಯಾದರೆ, ಗ್ರಾಹಕರಿಗೆ ಆನ್‌ಲೈನ್ ಮೂಲಕ ಆಗುತ್ತಿರುವ ಹಣಕಾಸಿನ ಮೋಸ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.
ಸೈಬರ್ ಕ್ರಿಮಿನಲ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿ, ನಕಲಿ ಹೆಸರಿನ ಗುರುತಿನೊಂದಿಗೆ ಗ್ರಾಹಕರಿಗೆ ಕರೆ ಮಾಡಿ ಹಣ ದೋಚುತ್ತಿರುವ ಪ್ರಕರಣಗಳು ವಿಪರೀತವಾಗುತ್ತಿವೆ.
ಸಿಮ್ ಪಡೆಯುವಾಗ ಎಸಗುವ ಮೋಸವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲು ಈ ವಿಧೇಯಕ ನೆರವಾಗಲಿದೆ.
ಅಲ್ಲದೇ, ನೂತನ ಟೆಲಿಕಾಂ ವಿಧೇಯಕದಲ್ಲಿ ಪ್ರತಿಯೊಬ್ಬ ಗ್ರಾಹಕನೂ ತನಗೆ ಬರುವ ಕರೆ ಯಾರಿಂದ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಅವಕಾಶವನ್ನೂ ನೀಡಲಿದೆ.
ಟೆಲಿ ಸರ್ವಿಸಸ್ ಮೂಲಕ ಆಗುವ ಸೈಬರ್ ಮೋಸಗಳನ್ನು ತಡೆಯಲು ಈ ವಿಧೇಯಕ ನೆರವಾಗಲಿದೆ. ಆದ್ದರಿಂದ ವ್ಯಕ್ತಿಯ ಐಟೆಂಟಿಟಿ ಸಂಬಂಧ ಕೆಲವು ನಿಯಮಗಳನ್ನು ಅಳವಡಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಮೊಬೈಲ್ ಬಳಕೆದಾರರು ತಮ್ಮ ಗುರುತು ಬಹಿರಂಗಪಡಿಸುವ ಕುರಿತು ಕರಡು ವಿಧೇಯಕದ ಸೆಕ್ಷನ್ 4ರ 7ನೇ ಉಪ ನಿಯಮ ಅಳವಡಿಸಲಾಗಿದೆ,” ಎಂದು ಕರಡು ಪ್ರತಿಯ ಬಗ್ಗೆ ಟೆಲಿಕಾಂ ಇಲಾಖೆ ಮಾಹಿತಿ ನೀಡಿದೆ.
ಹೊಸ ವಿಧೇಯಕವು ಸೈಬರ್ ಕ್ರೈಮ್‌ಗಳನ್ನು ನಿಗ್ರಹಿಸಲು ಸಮರ್ಥವಾದ ನಿಯಮಗಳನ್ನು ಒಳಗೊಂಡಿದೆ. ಕೆವೈಸಿ ಸಲ್ಲಿಕೆ ಗ್ರಾಹಕರ ಕರ್ತವ್ಯವಾಗಲಿದೆ.
ಈ ವಿಧೇಯಕದ ಅನುಷ್ಠಾನದಿಂದ ಸೈಬರ್ ಅಪರಾಧಗಳ ಗಣನೀಯ ಇಳಿಕೆಯಾಗಲಿವೆ ಎಂದು ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಗ್ರಾಹಕನಿಗೆ ಕರೆ ಬಂದಾಗ, ಆತನಿಗೆ ಯಾರು ಕರೆ ಮಾಡುತ್ತಿದ್ದಾರೆ ಎಂಬುದು ಆತನಿಗೆ ತಿಳಿಯಬೇಕು. ಇದು ವಾಯ್ಸ್‌ಕಾಲ್, ವಾಟ್ಸ್‌ಆ್ಯಪ್ ಕಾಲ್, ಫೇಸ್‌ಟೈಮ್ ಅಥವಾ ಒಟಿಟಿ ಕರೆ ಸೇರಿದಂತೆ ಯಾವುದೇ ಬಗೆಯ ಕಾಲ್‌ಗೆ ಅನ್ವಯಿಸುತ್ತದೆ.
ಕೆವೈಸಿ ಕಡ್ಡಾಯಗೊಳಿಸುವುದರಿಂದ ಎಲ್ಲ ಬಗೆಯ ಕಾಲ್‌ಗಳಲ್ಲಿ ಪಾರದರ್ಶಕತೆ ತರಲಾಗುತ್ತದೆ.
ಇದು ಕಾನೂನು ಬದ್ಧ ಆಗುವುದರಿಂದ ಒಟಿಟಿ ಕೂಡ ಈಗ ಟೆಲಿಕಾಂ ಕಾಯಿದೆಯಡಿ ಬಂದಂತಾಗಿದೆ,” ಎಂದು ವೈಷ್ಣವ್ ಸಮರ್ಥಿಸಿಕೊಂಡಿದ್ದಾರೆ.
ಮೊಬೈಲ್ ಸಿಮ್ ಪಡೆಯುವಾಗಿ ನಕಲಿ ದಾಖಲೆ ಕೊಡುವಂತಿಲ್ಲ
ಇದೊಂದು ಅಪರಾಧವಾಗಿದ್ದು, ಪೊಲೀಸ್ ಅಧಿಕಾರಿಗಳು ವಾರಂಟ್ ಇಲ್ಲದೇ ಬಂಧಿಸಬಹುದಾಗಿದೆ.
ಒಟಿಟಿಯಲ್ಲಿ ಕೆವೈಸಿ ಭರ್ತಿ ಕಡ್ಡಾಯಕ್ಕೂ ನಿಯಮ.