
ಯಾದಗಿರಿ ತಾಲೂಕಿನ ಶೆಟ್ಟಿಗೇರಿ ಗ್ರಾಮದಲ್ಲಿ ಆನೆ ಕಾಲು ರೋಗ ತಡೆ ಮಾತ್ರೆ ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶೆಟ್ಟಿಗೇರಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಆನೆಕಾಲು ಮಾತ್ರೆ ನೀಡಲಾಗಿತ್ತು.
ಮಾತ್ರೆ ಸೇವಿಸಿದ ಬಳಿಕ ಕೆಲವು ವಿದ್ಯಾರ್ಥಿಗಳಿಗೆ ವಾಂತಿ-ಭೇದಿಯಾಗಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೆಟ್ಟಿಗೇರಿ ಗ್ರಾಮದ ಸಮೀಪದ ಕೌಳೂರ ಪ್ರಾಥಮಿಕ ವೈದ್ಯಾಧಿಕಾರಿ ತಕ್ಷಣ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿಲ್ಲ, ಮಕ್ಕಳು ವಾಂತಿ-ಭೇದಿಯಿಂದ ಪರದಾಡುತ್ತಿದ್ದ ಸಂದರ್ಭದಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಗ್ರಾಮಕ್ಕೆ ಅನುಕೂಲವಾಗುವಂತೆ ಪ್ರಾಥಮಿಕ ಆಸ್ಪತ್ರೆ ಇದ್ದರೂ ಸಹ ಸೂಕ್ತ ಸಮಯದಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಚಿಕಿತ್ಸೆ ದೊರೆಯಲಿಲ್ಲ, ಇದಕ್ಕೆ ಪ್ರಾಥಮಿಕ ವೈದ್ಯಾಧಿಕಾರಿಯೇ ನೇರ ಹೊಣೆ ಎಂದು ಕೌಳೂರ ವೈದ್ಯಾಧಿಕಾರಿ ಸುನೀಲ್ ರಾಯಚೂರಕರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ವೈದ್ಯಾಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.