ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ

ಕಾಲ್ತುಳಿದಿಂದ ಹತ್ತಕ್ಕೂ ಹೆಚ್ಚು ಜನ ಮೃತಪಟ್ಟ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಸಾರ್ವಜನಿಕ ಸಭೆ ಮತ್ತು ರ್ಯಾಲಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.ಪ್ರತಪಕ್ಷ ತೆಲುಗು ದೇಶಂ ಪಕ್ಷದ ನಾಯಕ ಚಂದ್ರ ಬಾಬು ನಾಯ್ಡು ಅವರ ನೇತೃತ್ವದಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಘಟಿಸಿದ ಕಾಲ್ತುಳಿತದಿಂದ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು.
ಡಿಸೆಂಬರ್ 28ರಂದು ನೆಲ್ಲೂರು ಜಿಲ್ಲೆಯ ಕಂಡುಕುರಿನಲ್ಲಿ ನಡೆದ ಮೊದಲ ಕಾರ್ಯಕ್ರಮದಲ್ಲಿ ಕಾಲ್ತುಳಿತದಿಂದ ಏಳು ಮಂದಿ ಮೃತಪಟ್ಟಿದ್ದರು. ಅದೇ ರೀತಿ ಭಾನುವಾರ ಗುಂಟೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯೂ ಸೇರಿದಂತೆ ಮೂವರು ಸಾವನ್ನಪ್ಪಿದರು. ಹಲವಾರು ಮಂದಿ ಗಾಯಗೊಂಡಿದ್ದರು.
2024ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು, ನಮ್ಮ ರಾಜ್ಯಕ್ಕೆ ಏಕಿಂತಹ ಹಣೆ ಬರಹ ಎಂಬ ಅರ್ಥ ಬರುವ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.ಇವುಗಳಿಗೆ ಆಡಳಿತಾರೂಢ ವೈಎಸ್ಆರ್ಸಿಪಿ ಪಕ್ಷ ಬ್ರೆಕ್ ಹಾಕಿದೆ.
ಸರ್ಕಾರದ ಆದೇಶದ ಪ್ರಕಾರ ಆಂಧ್ರ ಪ್ರದೇಶದಲ್ಲಿ ಇನ್ನೂ ಮುಂದೆ ಯಾವುದೇ ಸಾರ್ವಜನಿಕ ಸಮಾರಂಭ ಮತ್ತು ರ್ಯಾಲಿಗಳನ್ನು ನಡೆಸಲು ಅವಕಾಶ ಇಲ್ಲ.ಚಂದ್ರಬಾಬು ನಾಯ್ಡು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಇತಂಹ ರ್ಯಾಲಿಗಳನ್ನು ಆಯೋಜನೆ ಮಾಡಿ ಜನರ ಪ್ರಾಣ ತೆಗೆಯುತ್ತಿದ್ದಾರೆ ಎಂದು ವೈಎಸ್ಆರ್ಸಿಪಿ ಆರೋಪಿಸಿತ್ತು.
ತಮ್ಮ ಪಕ್ಷದ ಕಾರ್ಯಕರ್ತರ ನಿಧನಕ್ಕೆ ತ್ರೀವ್ರ ಸಂತಾಪ ಸೂಚಿಸಿದ್ದ ಚಂದ್ರ ಬಾಬು ನಾಯ್ಡು, ಮೃತರ ಕುಟುಂಬಕ್ಕೆ ಪರಿಹಾರ ನೀಡಿ, ಅವರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುವುದಾಗಿ ತಿಳಿಸಿದರು.ಆದರೂ ಟಿಡಿಪಿ ವಿರುದ್ಧ ಟೀಕೆಗಳನ್ನು ವೈಎಸ್ಆರ್ಸಿಪಿ ಮುಂದುವರೆಸಿದೆ.
ಈಗ ಸಾರ್ವಜನಿಕ ಸಮಾವೇಶಗಳನ್ನೇ ನಿಷೇಧಿಸಿ ಚಂದ್ರಬಾಬು ನಾಯ್ಡುಗೆ ಬ್ರೆಕ್ ಹಾಕಲು ಸರ್ಕಾರ ಯತ್ನಿಸಿದೆ.