
ಚಿತ್ತೂರು/ಬೆಂಗಳೂರು: ಗಾಂಜಾ ಆರೋಪಿಗಳ ಪತ್ತೆಗೆ ತೆರಳಿದ್ದ ಬೆಂಗಳೂರು ಪೊಲೀಸರು ಆಂಧ್ರಪ್ರದೇಶದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದರ್ಮರಣ ಹೊಂದಿದ್ದಾರೆ. ಶಿವಾಜಿನಗರ ಠಾಣೆ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಭಾನುವಾರ ಬೆಳಗ್ಗೆ ಚಿತ್ತೂರು ಬಳಿ ಇನ್ನೋವಾ ಕಾರು ಅಪಘಾತ ನಡೆದಿದ್ದು, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಇನ್ನೋವಾ ಕಾರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಪಿಎಸ್ಐ ಅವಿನಾಶ್(29), ಕಾನ್ಸ್ಟೇಬಲ್ ಅನಿಲ್ ಮುಲಿಕ್(26) ಮತ್ತು ಕಾರು ಚಾಲಕ ಜೋಸೆಫ್ ಮೃತಪಟ್ಟಿದ್ದಾರೆ. ಅವಿನಾಶ್ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಆರಕೂಡು ಗ್ರಾಮದವರಾದರೆ, ಅನಿಲ್ ಮುಲಿಕ್ ಬಾಗಲಕೋಟೆಯ ಜಮಖಂಡಿ ತಾಲೂಕಿನ ಚಿಕ್ಕಳಕೆರೆ ಗ್ರಾಮದವರು.
ಶಿವಾಜಿನಗರ ಠಾಣೆಯ ಪ್ರೊಬೆಷನರಿ ಪಿಎಸ್ಐ ದೀಕ್ಷಿತ್(28), ಕಾನ್ಸ್ಟೇಬಲ್ ಶರಣಬಸವ(29) & ಬೆಂಗಳೂರಿನ ಅಮೃತಹಳ್ಳಿ ಲೇಔಟ್‍ನ ಮುನಿಸ್ವಾಮಪ್ಪ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ತಮಿಳುನಾಡಿನ ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಂಜಾ ಆರೋಪಿಗಳ ಪತ್ತೆಗಾಗಿ PSI ಅವಿನಾಶ್ ನೇತೃತ್ವದಲ್ಲಿ ಪೊಲೀಸ್ ಟೀಂ ಆಂಧ್ರಕ್ಕೆ ತೆರಳಿತ್ತು.
ಶನಿವಾರ ಬೆಂಗಳೂರಿನಿಂದ ಗಾಂಜಾ ಆರೋಪಿಗಳ ಬೆನ್ನತ್ತಿ ತೆರಳಿದ್ದ ತನಿಖಾ ಟೀಂ, ಚಿತ್ತೂರಿನಿಂದ ತಿರುಪತಿಯತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕಿರುವ ಬೆಂಗಳೂರು ಪೊಲೀಸರು ಅಪಘಾತ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.